ಕೊಡಗು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್ ಅವರನ್ನು ಸದ್ಯದಲ್ಲೇ ಬಂಧಿಸುತ್ತೇವೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ಪ್ರಮುಖ ಆರೋಪಿ ಮಾಜಿ ಮೇಯರ್ ಸಂಪತ್‌ರಾಜ್ ಬಂಧನಕ್ಕೆ ಈಗಾಗಲೇ 4 ತಂಡಗಳು ಹುಡುಕಾಟ ನಡೆಸುತ್ತಿವೆ. ಸದ್ಯದಲ್ಲೇ ಆರೋಪಿಯನ್ನು ವಶಕ್ಕೆ ಪಡೆಯುತ್ತೇವೆ ಎಂದಿದ್ದಾರೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ನಡೆದಿತ್ತು. ಬಳಿಕ ಅದನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನ್ನ ಕೆಲಸವನ್ನು ತಾನು ಮಾಡುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದರು.
ಇನ್ನೂ ಲವ್ ಜಿಹಾದ್ ಕಳೆದ ಒಂದು ದಶಕದಲ್ಲಿ ತೀವ್ರವಾಗಿದೆ. ಮದುವೆ ಮುಖಾಂತರ ಮತಾಂತರ ಮಾಡುವುದು ಸರಿಯಲ್ಲ. ಈ ಹಿಂದೆ ಅಲಹಬಾದ್ ಹೈಕೋರ್ಟ್ ಕೂಡ ಇದನ್ನೇ ಹೇಳಿದೆ. ನಮ್ಮ ರಾಜ್ಯದಲ್ಲೂ ಸಮಾಜದಲ್ಲಿ ಶಾಂತಿ ಹಾಳಾಗದಂತೆ ತಕ್ಷಣವೇ ಕಾನೂನು ಸಲಹೆ ಪಡೆದು ಕಾನೂನು ಮಾಡಲಾಗುವುದು ಎಂದರು.