ಕೊಡಗು: ಜಿಲ್ಲೆಯಲ್ಲಿ ಈ ಬಾರಿಯೂ ಭೂ ಕುಸಿತ ಅಥವಾ ಪ್ರವಾಹ ಎದುರಾದರೆ ಅದನ್ನು ಎದುರಿಸಲು ಪೊಲೀಸರು, ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದವರು ಸನ್ನದ್ಧರಾಗುತ್ತಿದ್ದಾರೆ.
ಹೌದು, ಕಳೆದ ಎರಡು ವರ್ಷ ಜಿಲ್ಲೆಯಲ್ಲಿ ಭಾರೀ ಭೂ ಕುಸಿತ ಮತ್ತು ಪ್ರವಾಹ ಸೃಷ್ಟಿಯಾಗಿತ್ತು. ಈ ವೇಳೆ ಸಾವಿರಾರು ಜನರು ಪ್ರವಾಹದಲ್ಲಿ ಸಿಕ್ಕಿಕೊಂಡರೆ, ಅದೆಷ್ಟೋ ಜನರು ಭೂ ಕುಸಿತದಲ್ಲಿ ಸಿಲುಕಿದ್ದರು. ಈ ವೇಳೆ ಎನ್‍ಡಿಆರ್ ಎಫ್ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರ ಜೀವ ಉಳಿಸಿದ್ದರು. ಆದರೆ ತಕ್ಷಣವೇ ಎದುರಾದ ಭೂ ಕುಸಿತ ಮತ್ತು ಪ್ರವಾಹವನ್ನು ಎದುರಿಸಲು ಹರಸಾಹಸ ಪಡಬೇಕಾಗಿತ್ತು. ಇಂತಹ ಸಮಸ್ಯೆ ಎದುರಾಗುವ ಬದಲು ಸರಾಗವಾಗಿ ಜನರನ್ನು ರಕ್ಷಿಸುವುದು ಹೇಗೆ ಎಂದು ಪೊಲೀಸರು, ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದವರು ಸಿದ್ಧತೆ ನಡೆಸುತ್ತಿದ್ದಾರೆ.
ಈಗಾಗಲೇ ಮಾನ್ಸೂನ್ ಆರಂಭವಾಗಿದ್ದು, ಭಾರೀ ಮಳೆ ಬಂದಲ್ಲಿ ಪ್ರವಾಹ ಅಥವಾ ಭೂ ಕುಸಿತವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಅಲರ್ಟ್ ಆಗಿದೆ. ಜಿಲ್ಲೆಗೆ 25 ಸಿಬ್ಬಂದಿ ಇರುವ ಎನ್‌ಡಿಆರ್‌ಎಫ್ ತಂಡ ಆಗಮಿಸಿದ್ದು, ಸ್ಥಳೀಯ ಡಿಆರ್, ಸಿವಿಲ್ ಪೊಲೀಸ್, ಅಗ್ನಿಶಾಮಕ ದಳ ಮತ್ತು ಹೋಂ ಗಾರ್ಡ್ ಸೇರಿದಂತೆ ತಲಾ 15 ಸಿಬ್ಬಂದಿ ಇರುವ ನಾಲ್ಕು ತಂಡಗಳನ್ನು ಮಾಡಲಾಗಿದೆ. ಒಟ್ಟು 60 ಸಿಬ್ಬಂದಿಯ ತಂಡಕ್ಕೆ ಎನ್‌ಡಿಆರ್‌ಎಫ್ ತಂಡ ಕಠಿಣ ತರಬೇತಿ ನೀಡುತ್ತಿದೆ.
ಪೊಲೀಸ್ ಇಲಾಖೆ ಕೂಡ ಕಳೆದ ಬಾರಿ ಜಿಲ್ಲೆಯಲ್ಲಿ ಎಲ್ಲಿ ಜಾಸ್ತಿ ಮಳೆ ಸುರಿದಿತ್ತು, ಎಲ್ಲಿ ಪ್ರವಾಹ ಎದುರಾಗಿತ್ತು, ಎಷ್ಟು ಮಿಲಿ ಮೀಟರ್ ಮಳೆ ಸುರಿದರೆ ಎಷ್ಟು ತೀವ್ರತೆಯ ಪ್ರವಾಹ ಸೃಷ್ಟಿಯಾಗುತ್ತೆ ಅನ್ನೋ ದಾಖಲೆಯನ್ನು ಸಂಗ್ರಹಿಸಿದೆ. ಹೀಗಾಗಿ ಈ ಬಾರಿ ಒಂದು ವೇಳೆ ಪ್ರವಾಹ ಎದುರಾದಲ್ಲಿ ಸರಾಗವಾಗಿ ಪ್ರಾಕೃತಿಕ ವಿಕೋಪ ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ.