ನಾಪೋಕ್ಲು/ಮಡಿಕೇರಿ: ಮಡಿಕೇರಿ ತಾಲೂಕಿನ ನಾಪೋಕ್ಲು-ಪಾರಾಣೆ ಸಂಪರ್ಕ ರಸ್ತೆ ಕಾಯಕಲ್ಪ ಕಾಣುವ ಬದಲು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸಂಪೂರ್ಣ ಹದಗೆಟ್ಟಿದ್ದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಪೋಕ್ಲು ಮಾರ್ಗವಾಗಿ ವಿರಾಜಪೇಟೆ ಸಂಪರ್ಕಿಸುವ ರಸ್ತೆ ಇದಾಗಿದೆ. ಸ್ಥಳೀಯ ಗುತ್ತಿಗೆದಾರರ ಅವೈಜ್ಞಾನಿಕ ಕೆಲಸದಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಇದರಿಂದ ಪ್ರತಿನಿತ್ಯ ವಾಹನ ಸವಾರರು ಗುಂಡಿ ಬಿದ್ದಿರುವ ರಸ್ತೆಗಳಲ್ಲೇ ಪ್ರಯಾಸದಿಂದ ಸಂಚರಿಸುತ್ತಿದ್ದಾರೆ. ಎತ್ತುಕಡವು ಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಪುರಾತನ ಸೇತುವೆಯ ಮಧ್ಯೆ ಕೆಸರಿನಿಂದ ಕೂಡಿರುವ ಹೊಂಡಗಳು ನಿರ್ಮಾಣವಾಗಿವೆ.
ಗುತ್ತಿಗೆದಾರರು ರಸ್ತೆಗೆ ಅಡ್ಡಲಾಗಿ ಒಂದು ಕಾಂಕ್ರೀಟ್ ಸೇತುವೆ ಮಾಡಿದ್ದಾರೆ. ಆದ್ರೆ ಸೇತುವೆ ಮೂಲಕ ಹಾದುಹೋಗಲು ಎರಡೂ ಬದಿಯಲ್ಲಿ ಸಮರ್ಪಕ ರೀತಿಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಜೋರು ಮಳೆ ಬಂದರೆ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆ ನಿಲ್ಲುತ್ತಿದೆ. ಹಾಗೆಯೇ ಪಕ್ಕದಲ್ಲಿರುವ ಕಾಫಿ ತೋಟಕ್ಕೂ ನುಗ್ಗುತ್ತಿದೆ. ಮೊದಲೇ ಇದ್ದಂತಹ ಚರಂಡಿಯಲ್ಲಿ ಸಂಪೂರ್ಣ ಮಣ್ಣು ತುಂಬಿರುವುದರಿಂದ ರಸ್ತೆ ಮೇಲೆಲ್ಲ ನೀರು ನಿಂತು ಗುಂಡಿಗಳು ನಿರ್ಮಾಣವಾಗಿವೆ.
ಲಾಕ್‌ಡೌನ್ ಘೋಷಿಸುವ ಮೊದಲೇ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದು, ಇತ್ತೀಚೆಗೆ ಸುರಿದ ಮಳೆಗೆ ರಸ್ತೆ ಮೇಲೆಲ್ಲ ನೀರು ತುಂಬಿತ್ತು. ಈ ಬಗ್ಗೆ ಯಾವುದೇ ಜನ ಪ್ರತಿನಿಧಿಗಳು ಬಂದು ನೋಡುತ್ತಿಲ್ಲ. ಶೀಘ್ರದಲ್ಲೇ ಕೆಲಸವನ್ನು ಪೂರ್ಣಗೊಳಿಸದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸ್ಥಳೀಯರು ಎಚ್ವರಿಕೆ ನೀಡಿದ್ದಾರೆ.