ಕೊಡಗು: ಜಗತ್ತಿನೆಲ್ಲೆಡೆ ಕೊರೊನಾ ಮಹಾಮಾರಿ ಆರ್ಭಟಿಸುತ್ತಿರುವಾಗಲೇ ಗೌರಿ-ಗಣೇಶ ಹಬ್ಬ ಬಂದಿದೆ. ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಇರುವಾಗಲೇ ಶಿಲ್ಪಿಗಳು ವಕ್ರತುಂಡನ ಮೂರ್ತಿಗಳನ್ನು ಸಿದ್ಧಗೊಳಿಸುತಿದ್ದಾರೆ. ಪ್ರತೀ ವರ್ಷ ಗಣೇಶ ಮೂರ್ತಿಗಳನ್ನು ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಶಿಲ್ಪಿಗಳ ದುಡಿಮೆ ಮೇಲೆ ಕೊರೊನಾ ವಕ್ರದೃಷ್ಟಿ ಬೀರಿದೆ.
ಬೃಹದಾಕಾರದ ಎಲೆ ಮೇಲೆ ಕುಳಿತಿರುವ ವಿಘ್ನೇಶ್ವರ, ಕುರ್ಚಿ ಮೇಲೆ ಕುಳಿತಿರುವ ಏಕದಂತ ಹೀಗೆ ವಿವಿಧ ಆಕಾರದ ಗಣೇಶ ಮೂರ್ತಿಗಳಿಗೆ ಶಿಲ್ಪಿಗಳು ಕೊನೆಯ ಟಚಪ್ ನೀಡುತ್ತಿದ್ದಾರೆ.
ಮಡಿಕೇರಿ ನಗರದ ನಿವಾಸಿ ಶಿಲ್ಪಿ ರವಿ ತಮ್ಮ ತಂದೆಯ ಕಾಲದಿಂದಲೂ ಅಂದರೆ 60 ವರ್ಷಗಳಿಂದಲೂ ಗಣೇಶ ಮೂರ್ತಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಅದರಲ್ಲೂ ಜೇಡಿ ಮಣ್ಣಿನಿಂದಲೇ ಸಂಪೂರ್ಣ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾಡುತ್ತಿರುವುದರಿಂದ ಅವರು ಮಾಡುತಿದ್ದ ಗಣೇಶ ಮೂರ್ತಿಗಳಿಗೆ ಭಾರೀ ಬೇಡಿಕೆ ಇತ್ತು.
ವರ್ಷವೊಂದಕ್ಕೆ ಕನಿಷ್ಠ 8ರಿಂದ 10 ಮೂರ್ತಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದರು. ಒಂದು ಮೂರ್ತಿಗೆ ಕನಿಷ್ಠ 3 ಸಾವಿರ ರೂಪಾಯಿಯಿಂದ 18 ಸಾವಿರದವರೆಗೆ ಮಾರುತ್ತಿದ್ದರು. ಆದರೆ ಕೊರೊನಾ ಬಂದಿರುವುದರಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಹಲವು ನಿಯಮಗಳನ್ನು ಜಾರಿ ಮಾಡಿದೆ. ಇದರಿಂದಾಗಿ ಸಂಘಟನೆಗಳು ಮತ್ತು ಜನಸಾಮಾನ್ಯರು ಗಣೇಶ ಮೂರ್ತಿಗಳನ್ನು ಕೂರಿಸಿ ಪೂಜಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ಕೇವಲ 2 ಮೂರ್ತಿಗಳ ನಿರ್ಮಾಣಕ್ಕೆ ಬೇಡಿಕೆ ಬಂದಿದ್ದು, ತುಂಬಾ ನಷ್ಟವಾಗಿದೆ ಎಂದು ಶಿಲ್ಪಿ ರವಿ ಹೇಳಿದ್ದಾರೆ.
ಗೌರಿ-ಗಣೇಶ ಹಬ್ಬ ಬರುವುದಕ್ಕೂ ಎರಡು ತಿಂಗಳಿಗೂ ಮೊದಲೇ ಗಣೇಶ ಮೂರ್ತಿ ನಿರ್ಮಾಣಕ್ಕೆ ಬೇಡಿಕೆ ಬರುತ್ತಿದ್ದವು. ಹತ್ತಾರು ಮೂರ್ತಿಗಳ ನಿರ್ಮಾಣಕ್ಕೆ 15ರಿಂದ 20 ಯುವಕರು ಹಗಲು ರಾತ್ರಿ ಎನ್ನದೆ ಎರಡು ತಿಂಗಳ ಕಾಲ ದುಡಿಯುತ್ತಿದ್ದೆವು. ನಾವು ಸಹ ಉತ್ತಮ ಆದಾಯ ಪಡೆಯುತ್ತಿದ್ದೆವು. ಆದರೆ ಈ ಬಾರಿ ಕೊರೊನಾದಿಂದಾಗಿ ಗಣೇಶ ಮೂರ್ತಿಗಳ ನಿರ್ಮಾಣಕ್ಕೆ ಬೇಡಿಕೆ ಬಂದಿಲ್ಲ. ಇದರಿಂದ 20 ಯುವಕರ ಬದಲಿಗೆ ಕೇವಲ ನಾಲ್ಕು ಜನರು ಮಾತ್ರವೇ ಕೆಲಸ ಮಾಡುತ್ತಿದ್ದೇವೆ. ಅವರಿಗೂ ಸಹ ಮಾಲೀಕರು ತಮ್ಮ ಕೈಯಿಂದ ಕೂಲಿ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೂ ಕೂಡ ದುಡಿಮೆ ಇಲ್ಲದಂತೆ ಆಗಿದೆ ಎಂದು ಶಿಲ್ಪಿಗಳು ಅಳಲು ತೋಡಿಕೊಂಡಿದ್ದಾರೆ.
ಗೌರಿ-ಗಣೇಶ ಹಬ್ಬಕ್ಕೆ ಗಲ್ಲಿ ಗಲ್ಲಿಯಲ್ಲಿ, ಬೀದಿ ಬೀದಿಯಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪಿಸುತ್ತಿದ್ದ ಯುವಕರ ಸಂಭ್ರಮವನ್ನು ಕಿತ್ತುಕೊಂಡಿರುವ ಕೊರೊನಾ, ಗಣೇಶ ಮೂರ್ತಿಗಳನ್ನು ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದ ಶಿಲ್ಪಿಗಳ ಆದಾಯಕ್ಕೂ ಕುತ್ತು ತಂದಿದೆ.