ಕೊಡಗು: ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರಗಳಿಂದ ಗಮನ ಸೆಳೆಯುವ ಕೊಡಗು ಜಿಲ್ಲೆಯಲ್ಲೀಗ ಮನೆ ಮನೆಯಲ್ಲೂ ಕೊಡವರ ವಿಶೇಷ ಕೈಲ್ ಮುಹೂರ್ತ ಹಬ್ಬದ ಸಂಭ್ರಮ ಕಳೆಗಟ್ಟಿದೆ.
ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳಿಂದ ಕೊಡವ ಜನಾಂಗದಿಂದ ಹಬ್ಬದ ಆಚರಣೆ ಪ್ರಾರಂಭವಾಗಿದೆ. ಹಾಗೆಯೇ ಮಡಿಕೇರಿಯಲ್ಲೂ ಕೂಡ ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಸಾರ್ವತ್ರಿಕ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಯಿತು.
ಮಹಿಳೆಯರು ಹಾಗೂ ಪುರುಷರು ಕೊಡವ ಸಾಂಪ್ರದಾಯಕ ಉಡುಗೆಯನ್ನು ತೊಟ್ಟು ಮಂದ್‌ನಲ್ಲಿ (ದೇವರ ಮರದ ಕೆಳಗೆ) ಕೋವಿ, ಕತ್ತಿ, ನೇಗಿಲುಗಳಿಗೆ ಸಾಮೂಹಿಕವಾಗಿ ಪೂಜೆಯನ್ನು ನೆರವೇರಿಸಿ ಕೈಲ್ ಮೂಹೂರ್ತವನ್ನ ವಿಜೃಂಭಣೆಯಿಂದ ಆಚರಿಸಿದ್ರು.
ಕೊಡಗಿನ ಆಯುಧ ಪೂಜೆ ಎಂದೇ ಕರೆಯಲ್ಪಡುವ ಈ ಕೈಲ್ ಮುಹೂರ್ತ ಹಬ್ಬವನ್ನ ಜಿಲ್ಲೆಯಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತೆ. ಕೈಲ್ ಮುಹೂರ್ತ ಹಬ್ಬವನ್ನ ಕೊಡಗಿನಲ್ಲಿ ಸಂಪ್ರದಾಯಗಳೊಂದಿಗೆ ಮನೋರಂಜನಾ ಹಬ್ಬವಾಗಿ ಆಚರಿಸುವುದು ಇಲ್ಲಿನ ವಾಡಿಕೆ. ಕೃಷಿಗೆ ಪ್ರಧಾನ ಆದ್ಯತೆ ನೀಡಿರುವ ಕೊಡಗು ಜಿಲ್ಲೆಯಲ್ಲಿ ವ್ಯವಸಾಯಕ್ಕೆ ಬಳಕೆಯಾದ ಉಪಕರಣಗಳಿಗೆ ಪೂಜೆ ಸಲ್ಲಿಸಿ ಈ ಹಬ್ಬವನ್ನ ಪ್ರಾರಂಭಿಸಲಾಗುತ್ತದೆ.
ಸೆಪ್ಟೆಂಬರ್‌ನಲ್ಲಿ ಆಚರಿಸುವ ಈ ಕೈಲ್ ಮುಹರ್ತ ಹಬ್ಬದ ಅಂಗವಾಗಿ ಕೊಡಗಿನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆದು ಸಂಭ್ರಮಿಸುತ್ತಾರೆ. ಮಹಿಳೆಯರು ಪುರುಷರು ಒಟ್ಟಿಗೆ ಸೇರಿ ಮರಕ್ಕೆ ತೆಂಗಿನ ಕಾಯಿ ಕಟ್ಟಿ ಗುಂಡು ಹೊಡೆಯುತ್ತಾರೆ. ಅಲ್ಲದೆ ಕೊಡವ ಸಾಂಪ್ರದಾಯಿಕ ನೃತ್ಯ ಮಾಡುತ್ತ ಕೈಯಲ್ಲಿ ಬಂದೂಕು, ಕತ್ತಿ, ಗುರಾಣಿಗಳನ್ನು ಹಿಡಿದು ನೃತ್ಯ ಮಾಡುವ ಮೂಲಕ ಖುಷಿ ಪಡುತ್ತಾರೆ. ಜಿಲ್ಲೆಯಲ್ಲಿ 15 ದಿನಗಳ ಕಾಲ ವಿಶಿಷ್ಟವಾಗಿ ಹಾಗೂ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.