ಕೊಡಗು: ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಗಳ ಬಳಿ ಬಿಡದೇ ಇದ್ದುದ್ದರಿಂದ 4 ದಿನಗಳ ಹಸುಗೂಸು ಮೃತಪಟ್ಟಿದೆ ಎಂಬ ಆರೋಪವನ್ನು ಸಂಬಂಧಿಕರು ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಮಾಡಿದ್ದಾರೆ.
ಮೈಸೂರು ಜಿಲ್ಲೆಯ ದೊಡ್ಡ ಕಮರಳ್ಳಿ ಗ್ರಾಮದ ಮಂಜುಳಾ ಹಾಗೂ ಚನ್ನಬಸಪ್ಪ ದಂಪತಿ ಮಗಳಾದ ಲಕ್ಷ್ಮಿ ಅವರನ್ನು ನಾಲ್ಕು ದಿನಗಳ ಹಿಂದೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ಕರೆ ತಂದು ಸಿಜೇರಿಯನ್ ಮಾಡಲಾಗಿತ್ತು. ಆದ್ರೆ, ವಾರ್ಡ್‌ನಲ್ಲಿ ತಾಯಿ ಮತ್ತು ಮಗು ಇಬ್ಬರನ್ನೇ ಇರಲು ಬಿಟ್ಟಿದ್ದಾರೆ. ನಮ್ಮನ್ನು ಅವರ ಬಳಿ ಹೋಗಲು ಆಸ್ಪತ್ರೆಯ ನರ್ಸ್ ಹಾಗೂ ಸೆಕ್ಯುರಿಟಿ ಸಿಬ್ಬಂದಿ ಬಿಟ್ಟಿಲ್ಲ.
ಹೀಗಾಗಿ ಮಗುವಿನ ಆರೈಕೆ ಅರಿಯದೆ ಮಗಳು ಹಾಲು ಕುಡಿಸಲು ಪ್ರಯತ್ನಿಸಿದ್ದಾಳೆ. ಪರಿಣಾಮ ಹಾಲು ನೆತ್ತಿಗೇರಿ ಮಗು ಮೃತಪಟ್ಟಿದೆ. ನನ್ನನ್ನು ಒಳಗೆ ಕಳುಹಿಸಿದ್ದರೆ ಈ ಅನಾಹುತ ಆಗುತ್ತಿತ್ತಾ?, ಮಗಳಿಗೆ 3 ವರ್ಷಗಳಿಂದ ಮಗು ಆಗಿರಲಿಲ್ಲ. ಈಗ ನೋಡಿದರೆ ಹೀಗಾಯ್ತು. ಇಷ್ಟಕ್ಕೆಲ್ಲ ಜಿಲ್ಲಾಸ್ಪತ್ರೆಯೇ ನೇರ ಹೊಣೆ ಎಂದು ಮೃತ ಕಂದಮ್ಮನ ಅಜ್ಜ-ಅಜ್ಜಿ ದೂರಿದ್ದಾರೆ.