ಕೊಡಗು (ಮಡಿಕೇರಿ): ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಿರಿಯರು, ಅವರು ಯಾವುದೇ ಒಂದು ಧರ್ಮವನ್ನು ಓಲೈಸುತ್ತಾ ಓಲೈಕೆ ರಾಜಕಾರಣ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಎ ಹೋರಾಟದಲ್ಲಿ ಸಿದ್ದರಾಮಯ್ಯ ಅವರು ನೀಡಿದ ಕುಮ್ಮಕ್ಕಿನಿಂದಲೇ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಾಟೆ ಶುರುವಾಗಿದೆ ಎನ್ನುವ ಸ್ವಪಕ್ಷಿಯ ಕೆಲವರ ಆರೋಪಕ್ಕೆ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಯಲ್ಲಿದ್ದವರು. ಹೇಗೆ ಸ್ಪಂದಿಸಿದ್ದಾರೋ ಗೊತ್ತಿಲ್ಲ. ಅವರಿಗೂ ಪರಿಜ್ಞಾನ ಇದೆ ಎಂದು ಭಾವಿಸಿದ್ದೇನೆ. ಅವರು ಒಂದೇ ಧರ್ಮವನ್ನು ಓಲೈಕೆ ಮಾಡಿ ವರ್ತಿಸಬಾರದು ಎಂದರು.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗಲಭೆ ವೇಳೆ ಶೂಟೌಟ್‌ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹೋಗಿ ಸಾಂತ್ವನ ಹೇಳಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಅವರು, ನೋಡಿ ಯಾರು ಯಾರ ಮನೆಗಾದರೂ ಹೋಗಲಿ. ನಾವೆಲ್ಲರೂ ಭಾರತೀಯರು. ದೇಶದ ಭದ್ರತೆ, ಅಖಂಡತೆ ಕಾಪಾಡುವುದು ನಮ್ಮ ಕರ್ತವ್ಯ. ಯಾರೇ ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಆರೋಪಿಗಳ ರಕ್ಷಣೆಗೆ ನಿಲ್ಲಬಾರದು. ಗಲಭೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಅವರೆಲ್ಲರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.