ಕೊಡಗು: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಲು ಸರ್ಕಾರಗಳು ಸಾಕಷ್ಟು ಪ್ರಯತ್ನಿಸುತ್ತಿವೆ. ಇದರ ಜೊತೆಗೆ ಸಾಕಷ್ಟು ಸಂಘ ಸಂಸ್ಥೆಗಳೂ ಕೈ ಜೋಡಿಸಿ ತಮ್ಮ ಕೈಲಾದ ಸಹಾಯ ಮಾಡುತ್ತಿವೆ.
ಆದರೆ ಇಲ್ಲೊಂದಷ್ಟು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬಿಡುವಿನ ವೇಳೆಯಲ್ಲಿ ಮಾಸ್ಕ್ ಹೊಲಿದು ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬಾಡಗ ಗ್ರಾಮದಲ್ಲಿರುವ ಅಂಗನವಾಡಿ ಶಿಕ್ಷಕಿ ಜಯಂತಿ ಸೇರಿದಂತೆ ನಾಲ್ಕೈದು ಅಂಗನವಾಡಿಗಳ ಶಿಕ್ಷಕಿಯರು ಮಾಸ್ಕ್ ಹೊಲಿದು ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ.
ಈಗಾಗಲೇ 150 ಕ್ಕೂ ಹೆಚ್ಚು ಮಾಸ್ಕ್ಗಳನ್ನು ಹೊಲಿದು ಬಡಜನರಿಗೆ ವಿತರಣೆ ಮಾಡಿದ್ದಾರೆ. ಈ ಶಿಕ್ಷಕಿಯರು ಕೂಡ ಕೊರೊನಾ ಡ್ಯೂಟಿ ಮಾಡುತ್ತಿದ್ದು, ಮಧ್ಯಾಹ್ನದವರೆಗೆ ಡ್ಯೂಟಿ ಮಾಡಿ ಬಳಿಕ ಬಿಡುವಿನ ವೇಳೆಯಲ್ಲಿ ಮಾಸ್ಕ್ ಹೊಲಿಯುತ್ತಿದ್ದಾರೆ. ಕೊರೊನಾ ಡ್ಯೂಟಿಗೆ ಹೋಗುವ ಸಂದರ್ಭ ಯಾವ ಗ್ರಾಮಗಳಲ್ಲಿ ಜನರು ಮಾಸ್ಕ್ ಧರಿಸಿರುವುದಿಲ್ಲವೋ ಅವರನ್ನು ಗಮನಿಸಿ ಅಂತಹವರಿಗೆ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.
ಗ್ರಾಮೀಣ ಭಾಗದ ಜನರಿಗೆ ಹಣ ನೀಡಿ ಮಾಸ್ಕ್ ಕೊಂಡು ಧರಿಸುವುದಕ್ಕೆ ಸಾಧ್ಯವಾಗದೇ ಇರಬಹುದು. ಹೀಗಾಗಿ ಅವರು ಮಾಸ್ಕ್ ಧರಿಸದೆಯೇ ಓಡಾಡುತ್ತಿದ್ದಾರೆ. ಇಂತಹವರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡುವ ಜೊತೆಗೆ ಕೊರೊನಾ ಕುರಿತು ಜನರಿಗೆ ಮಾಹಿತಿ ನೀಡುತ್ತಿದ್ದೇವೆ ಎನ್ನುತ್ತಾರೆ ಅಂಗನವಾಡಿ ಶಿಕ್ಷಕಿ.