ಕೊಡಗು: ಜಿಲ್ಲೆಯ ಕುಶಾಲನಗರದ ಆರ್ಕೇಸ್ಟ್ರಾ ಕಲಾವಿದ ರವಿ ಮತ್ತು ತಂಡ ‘ಮನೆಯೊಳಗೆ ಇದ್ರಷ್ಟೇ ಸೇಫ್ಟಿ.. ಹೊರಗೆ ಬರಬೇಡಿ ಜಾಸ್ತಿ, ಪೊಲೀಸರ ಕೈಯಲ್ಲಿ ಲಾಠಿ.. ಕೆಲಸ ಕೊಡ್ಬೇಡಿ ಜಾಸ್ತಿ’ ಎಂದು ಗೀತೆ ಬರೆದು ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ಮೈಸೂರಿನ ಮೋಹನ್ ಗೀತ ರಚನೆ ಮಾಡಿದ್ದು, ಮಹೇಶ್ ಕೋಟೆ ಅವರು ರಾಗ ಸಂಯೋಜನೆ ಮಾಡಿ ಸಂಗೀತ ನೀಡಿದ್ದಾರೆ. ಕುಶಾಲನಗರದ ವಿಶೇಷ ಚೇತನ ರವಿ ಅವರ ಕಂಠಸಿರಿಯಲ್ಲಿ ಹಾಡು ಮೂಡಿ ಬಂದಿದೆ.
ಸದ್ಯ ಗೀತೆಯ ರೆಕಾರ್ಡಿಂಗ್ ಮುಗಿದಿದ್ದು, ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸರ್ಕಾರಗಳು, ಸಂಘ ಸಂಸ್ಥೆಗಳು ಕೊರೊನಾ ಜಾಗೃತಿ ಮೂಡಿಸುತ್ತಿದ್ದರೂ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ. ಆದರೆ, ಸಂಗೀತ ಜನರನ್ನು ಬೇಗ ತಲುಪುವುದರಿಂದ ಗೀತೆ ಮೂಲಕ ಜನರನ್ನು ಜಾಗೃತಿಗೊಳಿಸಲು ಮುಂದಾಗಿದ್ದೇವೆ ಅಂತಾರೆ ಗಾಯಕ ರವಿ.
ಹಲವು ವರ್ಷಗಳಿಂದ ಆರ್ಕೇಸ್ಟ್ರಾ ಮಾಡಿಕೊಂಡು ಬದುಕು ನಡೆಸುತ್ತಿದ್ದೆವು. ಕೊರೊನಾ ಭೀಕರತೆಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇದುವರೆಗೆ ಸಾಕಷ್ಟು ಕಾರ್ಯಕ್ರಮಗಳು ಫಿಕ್ಸ್ ಆಗಿದ್ದವು. ಆ ಎಲ್ಲಾ ಕಾರ್ಯಕ್ರಮಗಳು ಕ್ಯಾನ್ಸಲ್ ಆಗಿವೆ. ಇದು ಇನ್ನೆಷ್ಟು ದಿನಗಳು ಹೀಗೆ ಮುಂದುವರೆದರೆ ಆರ್ಕೇಸ್ಟ್ರಾ ಕಲಾವಿದರ ಬದುಕು ಕಷ್ಟಕರವಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.