ಕೊಡಗು : ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಮುಗಿದಿದ್ದು, ಆಭ್ಯರ್ಥಿಗಳ ರಾಜಕೀಯ ಭವಿಷ್ಯ ಮತ ಪಟಿಗೆಯಲ್ಲಿ ಅಡಕವಾಗಿದೆ. ನಾಳೆ ಮತದಾರರ ತೀರ್ಪು ಹೊರಬೀಳಲಿದ್ದು, ಆಭ್ಯರ್ಥಿಗಳು ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳಿದ್ದು ಮಡಿಕೇರಿ ವಿಧಾನ ಸಭಾ ಕ್ಷೇತ್ರ ಮತ್ತು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರಗಳಿಗೆ ನಾಳೆ ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.
ಚುನಾವಣೆಯ ಅತ್ಯಂತ ಪ್ರಮುಖ ಮತ್ತು ಅಂತಿಮ ಹಂತವಾದ ಮತ ಎಣಿಕೆ ಕಾರ್ಯವು ಇಡೀ ಚುನಾವಣೆ ಪ್ರಕ್ರಿಯೆಯ ಮಹತ್ವದ ಘಟ್ಟವಾಗಿದೆ. ಜನಪ್ರತಿಯೊಬ್ಬರನನು ಆಯ್ಕೆ ಮಾಡುವ ಈ ಪ್ರಕ್ರಿಯೆಯಲ್ಲಿ ಸಿಬ್ಬಂದಿ ಯಾವುದೇ ಗೊಂದಲ, ಆತುರ, ಒತ್ತಡಗಳಿಗೆ ಒಳಗಾಗದೇ, ನಿಖರವಾದ ಫಲಿತಾಂಶ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಈ ಬಗ್ಗೆ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ. ಸತೀಶ್ ಬಿ.ಸಿ ಅವರು, ಮೇ 13 ರಂದು ಬೆಳಗ್ಗೆ 8 ರಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಎರಡು ವಿಧಾನಸಭಾ ಕ್ಷೇತ್ರದ ಎಣಿಕೆ ಕಾರ್ಯ ಸಂತ ಜೊಸೇಫರ ಕಾನ್ವೆಂಟ್ನಲ್ಲಿ ನಡೆಯಲಿದೆ. ಎಣಿಕೆ ಕೇಂದ್ರದಲ್ಲಿ 14 ಇವಿಯಂ ಎಣಿಕೆ ಟೇಬಲ್, 3 ಇಟಿಪಿಬಿಎಸ್ ಎಣಿಕೆ ಟೇಬಲ್ ಮತ್ತು 4 ಅಂಚೆ ಮತಪತ್ರಗಳ ಎಣಿಕೆ ಟೇಬಲ್ ಗಳನ್ನು ಅಳವಡಿಸಲಾಗಿದೆ. ಈ ಟೇಬಲ್‍ಗಳಿಗೆ ಅಭ್ಯರ್ಥಿಗಳು ಎಣಿಕೆ ಎಜೆಂಟರುಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಈ ಎಣಿಕೆ ಟೇಬಲ್‍ಗಳಲ್ಲದೇ ಎಣಿಕೆ ಕೇಂದ್ರದಲ್ಲಿ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರ ಟೇಬಲ್ ಹಾಗೂ ಟ್ಯಾಬುಲೇಷನ್ ಟೇಬಲ್ ಇರುತ್ತದೆ. ಅಭ್ಯರ್ಥಿಗಳು ಎಣಿಕೆ ಕೇಂದ್ರದಲ್ಲಿ ಇರುವುದಕ್ಕೆ ಅವಕಾಶವಿದ್ದು, ಅವರಿಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿದೆ.
ಎಣಿಕೆ ಕಾರ್ಯವನ್ನು ವೆಬ್‍ಕಾಸ್ಟಿಂಗ್ ಮಾಡಲಾಗುತ್ತದೆ. ಪ್ರತಿ ಇವಿಯಂ ಎಣಿಕೆ ಟೇಬಲ್‍ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು, ಒಬ್ಬರು ಎಣಿಕೆ ಸಹಾಯಕರು ಮತ್ತು ಒಬ್ಬರು ಮೈಕೋ ವೀಕ್ಷಕರು ಇರುತ್ತಾರೆ. ಪ್ರತಿ ಅಂಚೆ ಮತಪತ್ರ ಎಣಿಕೆ ಟೇಬಲ್‍ಗೆ ಒಬ್ಬರು ಸಹಾಯಕ ಚುನಾವಣಾಧಿಕಾರಿ, ಒಬ್ಬರು ಎಣಿಕೆ ಮೇಲ್ವಿಚಾರಕರು ಮತ್ತು ಇಬ್ಬರು ಎಣಿಕೆ ಸಹಾಯಕರು ಇರುತ್ತಾರೆ. ಪ್ರತಿ ಇಟಿಪಿಬಿಎಸ್ ಎಣಿಕೆ ಟೇಬಲ್‍ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು ಮತ್ತು ಒಬ್ಬರು ಎಣಿಕೆ ಸಹಾಯಕರು ಇರುತ್ತಾರೆ ಎಂದು ಡಿಸಿ ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ : ಇಂದು ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಮಧ್ಯರಾತ್ರಿ 12 ಗಂಟೆಯವರೆಗೆ ಸೆ. 144 ಜಾರಿಗೊಳಿಸಲಾಗಿದೆ. ಜಿಲ್ಲೆಯಾದ್ಯಂತ ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರಣಿಗೆ ತೆರಳುವುದು, ರಾಜಕೀಯ ಸಭೆ, ಸಮಾರಂಭ, ವಾಹನ ಜಾಥಾ ಆಯೋಜನೆ, ಮುಂತಾದವುಗಳಿಗೆ ನಿಷೇಧವಿದ್ದು, ದಹನ ವಸ್ತು, ಮಾರಕ ಆಯುಧಗಳೊಂದಿಗೆ ಸಂಚರಿಸುವುದು, ಖಾಸಗಿ ವಾಹನಗಳ ತಂಗುವಿಕೆ, ಧ್ವನಿ ವರ್ಧಕ ಬಳಕೆಗೂ ನಿಷೇಧ. ಆದೇಶ ಮೀರಿ ಕಾನೂನು ಉಲ್ಲಂಘಿಸಿದರೆ ಕಾನೂನು ಕ್ರಮದ ಕೊಳ್ಳುವುದಾಗಿ ಡಾ.ಬಿ.ಸಿ.ಸತೀಶ್ ಆದೇಶ ಹೊರಡಿಸಿದರು.
ಇದನ್ನೂ ಓದಿ : ಪಕ್ಷಕ್ಕಾಗಿ ಶ್ರಮ ಪಟ್ಟಿದ್ದೇನೆ, ಈಗ ನನಗೆ ಹಿರಿ-ಕಿರಿಯರ ಸಹಕಾರ ಸಿಗುವ ವಿಶ್ವಾಸ ಇದೆ: ಡಿಕೆಶಿ