ಕಲಬುರಗಿ: ನಡೆದುಕೊಂಡು ಹೊರಟಿದ್ದ ಯುವಕನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಹಣ, ಮೊಬೈಲ್ ಕಸಿದುಕೊಂಡು ಹೋಗಿರುವ ಘಟನೆ ಇಲ್ಲಿನ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಜನಗರದಲ್ಲಿ ವಾಸಿಸುತ್ತಿರುವ ಸಂದೀಪ್ ಕುಮಾರ್ ಜನಿಹರ್ (20) ದುಷ್ಕರ್ಮಿಗಳಿಂದ ಗಾಯಗೊಂಡಿರುವ ಯುವಕ. ಉತ್ತರ ಪ್ರದೇಶದ ಲಖಿಪುರ ಮೂಲದ ಸಂದೀಪ್ ಕುಮಾರ್, ಸಿಮೆಂಟ್ ಹೂಕುಂಡಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದ. ಸಾಯಂಕಾಲ ನಡೆದುಕೊಂಡು ಹೋಗುವಾಗ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹಣ, ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ತೀವ್ರ ಸ್ವರೂಪದ ಗಾಯಗಳಾಗಿ ನರಳಾಡುತ್ತಿದ್ದ ಸಂದೀಪನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಜಿಲ್ಲೆಯಲ್ಲಿ ನಿರ್ಭಯವಾಗಿ ದುಷ್ಕರ್ಮಿಗಳು ಕೊಲೆ, ಸುಲಿಗೆ, ಮನೆಗಳ್ಳತನ ಮಾಡುತ್ತಿದ್ದು, ನಗರದ ನಿವಾಸಿಗಳು ಆತಂಕದಲ್ಲಿದ್ದಾರೆ. ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸಿ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವಂತೆ ನಗರದ ಜನತೆ ಆಗ್ರಹಿಸಿದ್ದಾರೆ.