ಕಲಬುರಗಿ : ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಕಬ್ಬು ಬೆಳೆಯುವ ರೈತರು ಪ್ರತಿವರ್ಷ ಒಂದಿಲ್ಲವೊಂದು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಸಕ್ಕರೆ ಕಾರ್ಖಾನೆಗಳಿಂದ ಸರಿಯಾದ ಸಮಯಕ್ಕೆ ಬಿಲ್ ಪಾವತಿ ಮಾಡದಿರೋದು, ಸರ್ಕಾರದಿಂದ ಕಬ್ಬಿಗೆ ಬೆಲೆ ನಿಗದಿ ಮಾಡದಿರೋದು ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುವ ರೈತರು, ಈ ವರ್ಷ ಕೂಡ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
ಇದೇ ತಿಂಗಳ 15 ರೊಳಗೆ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯ ಸಕ್ಕರೆ ಕಾರ್ಖಾನೆಗಳ ಮಾಲೀಕರ ಮತ್ತು ಕಲಬುರಗಿ ಜಿಲ್ಲೆ ಕಬ್ಬು ಬೆಳೆಗಾರರ ಸಂಘದ ಮುಖಂಡರ ಸಭೆಯನ್ನ ಜಿಲ್ಲಾಧಿಕಾರಿಗಳು ಕರೆಯಬೇಕೆಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಜಗದೀಶ್ ಪಾಟೀಲ್ ಮನವಿ ಮಾಡಿದ್ದಾರೆ.
ಅಲ್ಲದೇ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 2,800 ರೂ. ದರ ನಿಗದಿ ಮಾಡಬೇಕೆಂದು ಜಗದೀಶ್ ಪಾಟೀಲ್ ಆಗ್ರಹಿಸಿದ್ದಾರೆ. ಒಂದು ವೇಳೆ ಡಿಸಿ ಅವರು ಸಭೆಯನ್ನ ಕರೆಯದಿದ್ದಲ್ಲಿ ನವೆಂಬರ್ 17ರಂದು ನೂರಾರು ರೈತರು ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಅಂತಾ ಎಚ್ಚರಿಕೆ ಸಹ ನೀಡಿದರು.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದ ಬಳಿಯಿರುವ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆ, ಅಫಜಲಪುರ ತಾಲೂಕಿನ ಮಳ್ಳಿ ಗ್ರಾಮದ ಬಳಿಯಿರುವ ರೇಣುಕಾ ಸಕ್ಕರೆ ಕಾರ್ಖಾನೆ ಮತ್ತು ಯಾದಗಿರಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2800 ರೂಪಾಯಿ ಬೆಲೆ ಘೋಷಣೆ ಮಾಡಬೇಕೆಂಬ ಮೊದಲಿನಿಂದಲೂ ಆಗ್ರಹ ಕೇಳಿ ಬರುತ್ತಿದೆ. ಇನ್ನೂ ಕಬು ಬೆಳೆಗಾರರ ಸಂಘ ಟನದ ಕಬ್ಬಿಗೆ 2800 ರೂಪಾಯಿ ಬೆಲೆ ನಿಗದಿ ಮಾಡುವಂತೆ ಆಗ್ರಹಿಸುತ್ತಿದ್ದರೆ.
ಇತ್ತ ಸಿಪಿಐಎಂ ಹಾಗೂ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಮಾಧ್ಯಮಗಳ ಜೊತೆ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಪರಿಸ್ಥಿತಿ ತೀರಾ ಹೀನಾಯ ಪರಿಸ್ಥಿತಿಯಲ್ಲಿದ್ದು, ಡಾ.ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಟನ್ ಕಬ್ಬಿಗೆ 3,500 ರೂಪಾಯಿ ದರ ನಿಗದಿ ಮಾಡಬೇಕು ಮತ್ತು ಸರಿಯಾದ ಸಮಯದಲ್ಲಿ ರೈತರಿಂದ ಕಬ್ಬು ಖರೀಧಿಸಬೇಕೆಂದು ಆಗ್ರಹಿಸಿದ್ದಾರೆ.