ಕಲಬುರಗಿ: ಲಾಕ್ ಡೌನ್ ಆದೇಶ ಉಲ್ಲಂಘನೆ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ 5 ಅಂಗಡಿ ಮಾಲೀಕರ ವಿರುದ್ದ ಕಲಬುರಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಂಗಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರಿಂದ ನೂಕು ನುಗ್ಗಲು ಉಂಟಾದ ಕಾರಣ ಆರ್.ಜಿ.ನಗರ ಠಾಣಾ ವ್ಯಾಪ್ತಿಯ ಜನರಲ್ ಸ್ಟೋರ್ ಮಾಲೀಕ ಅಬ್ದುಲ್ ಬಿಕಾರ್ ಶೇಖ್ ಎಂಬುವರ ವಿರುದ್ಧ ಐಪಿಸಿ ಸೆಕ್ಷನ್ 188ರ ಅಡಿ ಕೇಸ್ ದಾಖಲಾಗಿದೆ.
ಇದೇ ರೀತಿ ಎಮ್.ಬಿ. ನಗರ ಠಾಣಾ ವ್ಯಾಪ್ತಿಯ ಸೂಪರ್ ಮಾರ್ಕೆಟ್ ಮಾಲೀಕ ಸಂಜೀವ್ ಕರಿಕಲ್ ಮತ್ತು ಗುರುದತ್ತ ಬಾವಗಿ ಅವರ ವಿರುದ್ಧ ಐಪಿಸಿ ಸೆಕ್ಷನ್ 188,268,270 ಅಡಿ ಪ್ರಕರಣ ದಾಖಲಾಗಿದೆ. ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಕಿರಾಣಿ ಅಂಗಡಿ ಮಾಲೀಕರಾದ ಚಿನ್ನು , ಅಜರುದ್ದೀನ್ ಮತ್ತು ಆಸೀಫ್ ಎಂಬುವವರ ಮೇಲೂ ಪೊಲೀಸರು ಕೇಸ್ ಹಾಕಿದ್ದಾರೆ.
ಇನ್ಮುಂದೆ ಇದೇ ರೀತಿ ಕಾನೂನು ಉಲ್ಲಂಘಿಸಿದರೆ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್ ಜಿಲ್ಲೆಯ ವರ್ತಕರು, ಸಾರ್ವಜನಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.