ಕಲಬುರಗಿ : ಮುಖ್ಯ ಶಿಕ್ಷಕ ಮತ್ತು ಕಂಪ್ಯೂಟರ್ ಆಪರೇಟರ್ ಇಬ್ಬರು ಸೇರಿಕೊಂಡು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚಿಂಚೋಳಿ ತಾಲೂಕಿನ ಕುಂಚಾವರಂ ಠಾಣಾ ವ್ಯಾಪ್ತಿಯ ವಸತಿ ಶಾಲೆಯಲ್ಲಿ ಇಂತಹದೊಂದು ಸಂಗತಿ ಬೆಳಕಿಗೆ ಬಂದಿದೆ.
ಬಾಲಕಿಯರ ಮೈ-ಕೈ ಮುಟ್ಟುವುದು, ಅಸಭ್ಯ ಮತ್ತು ಅಶ್ಲೀಲವಾಗಿ ಮಾತನಾಡುವುದು, ಕೊಠಡಿಯಲ್ಲಿ ಮಲಗಿದಾಗ ಇಣುಕಿ ನೋಡುವುದು ಮಾಡುತ್ತಾರೆ ಎಂದು ಆರೋಪ ಮಾಡಿರುವ ವಿದ್ಯಾರ್ಥಿನಿಯರು, ನಿನ್ನೆ ರಾತ್ರಿ ಊಟ ಮಾಡದೇ ಮುಖ್ಯ ಶಿಕ್ಷಕ ಮತ್ತು ಕಂಪ್ಯೂಟರ್ ಆಪರೇಟರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಪಾಲಕರಿಗೆ ವಿಷಯ ತಿಳಿದಾಗ ವಸತಿ ಶಾಲೆಗೆ ಆಗಮಿಸಿ ಕೈಗೆ ಸಿಕ್ಕ ಕಂಪ್ಯೂಟರ್ ಆಪರೇಟರ್ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಚಿಂಚೋಳಿ ತಹಶೀಲ್ದಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕಲಬುರಗಿ ಎಸ್ಪಿ ಇಶಾ ಪಂತ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ಕೌನ್ಸೆಲಿಂಗ್ ಮಾಡಿ ಧೈರ್ಯ ಹೇಳಿ ಊಟ ಮಾಡಲು ಮನವೊಲಿಸಿ ತಾವೇ ಮುಂದೆ ನಿಂತು ಊಟ ಮಾಡಿಸಿದ್ದಾರೆ.
ಸದ್ಯ ಸಮಾಜ ಕಲ್ಯಾಣ ಇಲಾಖೆಯ ಚಿಂಚೋಳಿ ತಾಲೂಕು ಸಹಾಯಕ ನಿರ್ದೇಶಕ ಪ್ರಭುಲಿಂಗ ವಾಲಿ ಅವರು ನೀಡಿದ ದೂರಿನ ಮೇರೆಗೆ ವಸತಿ ಶಾಲೆಯ ಮುಖ್ಯ ಶಿಕ್ಷಕ ಮತ್ತು ಕಂಪ್ಯೂಟರ್ ಆಪರೇಟರ್ ವಿರುದ್ಧ ಕುಂಚಾವರಂ ಠಾಣೆಯಲ್ಲಿ ಪೊಕ್ಸೊ, ಅಟ್ರಾಸಿಟಿ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಇಬ್ಬರನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹಿಂದೂ ಸಂಘಟನೆ ಜೊತೆ ಗುರುತಿಸಿಕೊಂಡಿದ್ದೇ ತಪ್ಪಾಯ್ತು; ವೈದ್ಯರ ತಲೆ ಕತ್ತರಿಸುವ ಬೆದರಿಕೆ