ಕಲಬುರಗಿ: ಅಧಿಕಾರಿಗಳು ಮಾಡುವ ಯಡವಟ್ಟು, ತಪ್ಪುಗಳಿಂದ ಜನರು ಸಮಸ್ಯೆಗಳನ್ನು ಅನುಭವಿಸಿರುವ ಸಾಕಷ್ಟು ಉದಾಹರಣೆಗಳಿವೆ. ಇಂಥದ್ದೇ ಒಂದು ಯಡವಟ್ಟೀಗ ಜಿಲ್ಲೆಯಲ್ಲಿ ನಡೆದಿದೆ. ಇದರಿಂದಾಗಿ ಅಫಜಲಪುರ ತಾಲ್ಲೂಕಿನ ಹಾವನೂರ ಗ್ರಾಮದ ರೈತರು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕ್ತಿದ್ದಾರೆ. ಇವರ ಆಕ್ರೋಶಕ್ಕೆ ಕಾರಣ ರಸ್ತೆ ಕಾಮಗಾರಿ.
ಹೌದು.. ಕಲಬುರಗಿ ತಾಲ್ಲೂಕಿನ ಕಡಣಿ ಗ್ರಾಮದಿಂದ ಅಫಜಲಪುರ ತಾಲ್ಲೂಕಿನ ಗೊಬ್ಬೂರು (ಬಿ) ಗ್ರಾಮದವರೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಆದರೆ ರಸ್ತೆ ಕಾಮಗಾರಿಗಾಗಿ ರಸ್ತೆ ಅಕ್ಕ ಪಕ್ಕದ ರೈತರ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ರೈತರು ಆರೋಪ ಮಾಡ್ತಿದ್ದಾರೆ.
ಕಡಣಿ, ಹಾವನೂರು ಮತ್ತು ಗೊಬ್ಬೂರು (ಬಿ) ಗ್ರಾಮದ ನೂರಾರು ರೈತರ ಜಮೀನು ರಸ್ತೆ ಕಾಮಗಾರಿಯಲ್ಲಿ ಹೋಗಿವೆ. ಕೆಲ ರೈತರದ್ದು ಒಂದು, ಎರಡು ಗುಂಟೆ ಹೋದ್ರೆ, ಮತ್ತೆ ಕೆಲ ರೈತರದ್ದು ಎಕರೆಗಟ್ಟಲೆ ಕೃಷಿ ಜಮೀನು ರಸ್ತೆ ಕಾಮಗಾರಿಯಲ್ಲಿ ಹೋಗಿದೆಯಂತೆ. ಯಾವುದೇ ಸರ್ವೆ ಮಾಡದೆ, ಹೇಳದೆ- ಕೇಳದೆ ತಮ್ಮ ಮನಸ್ಸಿಗೆ ಬಂದಂತೆ ನಮ್ಮ ಜಮೀನನ್ನು ಒತ್ತುವರಿ ಮಾಡಿ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಈ ರಸ್ತೆ ಕಾಲು ದಾರಿ ಮತ್ತು ಬಂಡಿ ರಸ್ತೆಯಾಗಿತ್ತು. ಕೇವಲ 10-12 ಅಡಿ ಅಗಲ ಹೊಂದಿದ್ದ ಈ ರಸ್ತೆಯನ್ನು ಡಾಂಬರ ರಸ್ತೆ ಮಾಡಲು 6 ಕೋಟಿ 31 ಲಕ್ಷ ವೆಚ್ಚದಲ್ಲಿ ಪಿಎಂಜಿಎಸ್ವೈ ಯೋಜನೆಯಲ್ಲಿ ಗೊಬ್ಬೂರು (ಬಿ) ಗ್ರಾಮದಿಂದ ಕಡಣಿ ಗ್ರಾಮದ ವರೆಗೆ 9.2 ಕಿಮೀ ಉದ್ದ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಕಳೆದ ಜುಲೈ ತಿಂಗಳಿಂದ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಆದ್ರೆ ರಸ್ತೆ ಅಕ್ಕ ಪಕ್ಕದ ರೈತರಿಗೆ ಯಾವುದೇ ರೀತಿಯ ಮಾಹಿತಿ ಕೊಡದೆ ತಮಗಿಷ್ಟ ಬಂದಂತೆ ರೈತರ ಜಮೀನನ್ನು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಿಸಲಾಗುತ್ತಿದೆ. ಎಕರೆ ಜಮೀನಿಗೆ ಲಕ್ಷಾಂತರ ಬೆಲೆಯಿರೋದ್ರಿಂದ ರೈತರು ಸೂಕ್ತ ಪರಿಹಾರ ಕೊಡಿ ಎಂದು ಕೇಳ್ತಿದ್ದಾರೆ. ಪರಿಹಾರ ಕೊಡದಿದ್ರೆ ಕಾಮಗಾರಿ ಬಂದ್ ಮಾಡಿ ಎನ್ನುತ್ತಿದ್ದಾರೆ.
ರಸ್ತೆ ನಿರ್ಮಾಣ ಆಗುತ್ತಿರೋದಕ್ಕೆ ರೈತರಲ್ಲಿ ಖುಷಿ ಇದೆ. ಆದ್ರೆ ಬೆಲೆ ಬಾಳುವ ಜಮೀನು ಹೋಗಿರೋದ್ರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕಿದೆ.