ಕಲಬುರಗಿ: ಬಡ ರೈತರು ಕಷ್ಟಪಟ್ಟು ಬೆಳೆಯುವ ಬೆಳೆಗಳನ್ನು ಕೊಂಡುಕೊಳ್ಳುವ ಖಾಸಗಿ ಕಂಪನಿಗಳು ಸರಿಯಾಗಿ ಹಣ ಕೊಡದೆ ಸತಾಯಿಸುತ್ತಿರುವುದು ಹೊಸತೇನಲ್ಲ. ಇದೀಗ ಅಂತಹದ್ದೇ ದೂರುಗಳು ಜಿಲ್ಲೆಯಲ್ಲಿ ಕೇಳಿ ಬಂದಿವೆ.
ಕಲಬುರಗಿಯ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆ ರೈತರಿಗೆ ಕಡಿಮೆ ದರ ಕೊಟ್ಟು ಮೋಸ ಮಾಡಿದ್ರೆ, ಯಾದಗಿರಿಯ ಕೋರಗ್ರಿನ್ ಸಕ್ಕರೆ ಕಾರ್ಖಾನೆ ಬಾಕಿ ಹಣ ಕೊಡದೆ ಪೀಡಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸಕ್ಕರೆ ಕಾರ್ಖಾನೆಗಳ ಅನ್ಯಾಯಕ್ಕೆ ರೋಸಿ ಹೋಗಿರುವ ಬೆಳೆಗಾರರು ಮತ್ತೆ ಹೋರಾಟದ ಹಾದಿ ತುಳಿಯಲು ಮುಂದಾಗಿದ್ದಾರೆ.
200 ರೂ. ಕಡಿಮೆ ಕೊಟ್ಟು ವಂಚನೆ
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಭೂಸನೂರ ಗ್ರಾಮದ ಬಳಿಯಿರುವ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆ ಕಬ್ಬು ಖರೀದಿಯಲ್ಲಿ ವಂಚಿಸಿದೆ ಎಂದು ಕಬ್ಬು ಬೆಳೆಗಾರರು ಆರೋಪಿಸುತ್ತಿದ್ದಾರೆ. ಕಳೆದ ವರ್ಷ ಒಂದು ಟನ್ ಕಬ್ಬಿಗೆ 2,300 ರೂಪಾಯಿ ದರ ನಿಗದಿಯಾಗಿದೆ. ಆದರೆ, ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಯವರು ಒಂದು ಟನ್ ಕಬ್ಬಿಗೆ 2,100 ರೂ. ಮಾತ್ರ ನೀಡಿ 200 ರೂ. ಮೋಸ ಮಾಡಿದ್ದಾರೆ ಎನ್ನುತ್ತಿದ್ದಾರೆ.
'8 ಕೋಟಿ ರೂ. ಮೋಸ'
ರೈತರ ಪ್ರತಿ ಟನ್ ಕಬ್ಬಿಗೆ 200 ರೂ. ನಂತೆ ಸುಮಾರು 8 ಕೋಟಿ ಹಣ ಕಾರ್ಖಾನೆ ಬಾಕಿ ಉಳಿಸಿಕೊಂಡಿದೆಯಂತೆ. ಹೀಗಾಗಿ, ಬಾಕಿ 8 ಕೋಟಿ ರೂ. ಹಣ ನೀಡುವಂತೆ ರೈತರು ಕಾರ್ಖಾನೆಗೆ ಅಲೆದಾಡುತ್ತಿದ್ದಾರೆ. ಹಲವು ಬಾರಿ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ ಎಂದು ಕಬ್ಬು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ. ಬಾಕಿ ಹಣ ಕೊಡದಿದ್ದರೆ ಉಗ್ರ ಹೋರಾಟದ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯ ಪಕ್ಕದ ಯಾದಗಿರಿ ಜಿಲ್ಲೆಯ ಕೋರಗ್ರಿನ್ ಸಕ್ಕರೆ ಕಾರ್ಖಾನೆ ಕೂಡ ಕಬ್ಬು ಬೆಳೆಗಾರರಿಗೆ ಪ್ರತಿ ವರ್ಷ ಬಾಕಿ ಹಣ ಕೊಡದೆ ಸತಾಯಿಸುತ್ತಿರುವ ಆರೋಪಿಸಲಾಗಿದೆ.
ಯಾದರಿಗಿ ಕಾರ್ಖಾನೆಯದ್ದೂ ಇದೇ ಸಮಸ್ಯೆ
ಯಾದಗಿರಿ ಜಿಲ್ಲೆಯ ಕೋರಗ್ರಿನ್ ಸಕ್ಕರೆ ಕಾರ್ಖಾನೆಗೆ ಕಲಬುರಗಿ ಜಿಲ್ಲೆಯ ಸಾವಿರಾರು ರೈತರು ಪ್ರತಿ ವರ್ಷ 2 ಲಕ್ಷ ಟನ್ಗೂ ಅಧಿಕ ಕಬ್ಬು ಹಾಕುತ್ತಾರೆ. ಆದರೆ, ಸಮಯಕ್ಕೆ ಸರಿಯಾಗಿ ರೈತರಿಗೆ ಕೊಡಬೇಕಾದ ಹಣ ಕೊಡುತ್ತಿಲ್ಲವಂತೆ. ಹೈಕೋರ್ಟ್ ಆದೇಶ ಇದ್ದರೂ ಎನ್.ಎಸ್.ಎಲ್ ಮತ್ತು ಕೋರಗ್ರಿನ್ ಶುಗರ್ ಕಾರ್ಖಾನೆಗಳು ಬಾಕಿ ಹಣ ಕೊಡದೆ ಸತಾಯಿಸುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.
45 ಕೋಟಿ ರೂ. ರೈತರಿಗೆ ಬಾಕಿ
ಕೋರಗ್ರಿನ್ ಸಕ್ಕರೆ ಕಾರ್ಖಾನೆ ಕಳೆದ ವರ್ಷ ರೈತರಿಗೆ ಕೊಡಬೇಕಾದ ಅಂದಾಜು 45 ಕೋಟಿ ಹಣ ಬಾಕಿ ಉಳಿಸಿಕೊಂಡಿದೆಯಂತೆ. ಸಮಯಕ್ಕೆ ಸರಿಯಾಗಿ ಕಬ್ಬಿನ ಹಣ ಸಿಗದೆ ರೈತರಿಗೆ ಮತ್ತೆ ಕಬ್ಬು ಬೆಳೆಯಲು ಕಷ್ಟವಾಗುತ್ತಿದ್ದು, ಸಾಲ-ಸೂಲ ಮಾಡಿ ಸಮಸ್ಯೆ ಎದುರಿಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳು ನೀಡಬೇಕಾದ ಬಾಕಿ ಹಣಕ್ಕಾಗಿ ಒತ್ತಾಯಿಸಿ ಕಬ್ಬು ಬೆಳೆಗಾರರು ಆಗಸ್ಟ್ 12 ರಂದು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದರು ಬೃಹತ್ ಪ್ರತಿಭಟನೆಗೆ ಸಿದ್ದತೆ ಮಾಡಿಕೊಂಡಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ : ಪ್ರತಿಭಟನೆ ನಂತರವೂ ಸಮಸ್ಯೆ ಬಗೆಹರಿಯದಿದ್ದರೆ, ಬೃಹತ್ ಪ್ರತಿಭಟನಾ ಬೈಕ್ ರ್ಯಾಲಿ ನಡೆಸಿ ಸಕ್ಕರೆ ಕಾರ್ಖಾನೆಗಳಿಗೆ ಬೀಗ ಜಡಿಯುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.