ಕಲಬುರಗಿ: ಪ್ರಧಾನಿ ಮೋದಿ ಹಿಟ್ಲರ್ ಅಲ್ಲ, ಅವರಪ್ಪ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಹೇರಿ ಇಂದಿರಾಗಾಂಧಿ ಹಿಟ್ಲರ್ನಂತೆ ವರ್ತಿಸಿದ್ದರು ಎಂದು ಈ ಹಿಂದೆ ಆರೋಪ ಕೇಳಿಬಂದಿತ್ತು. ಆದರೆ, ಈಗ ಪ್ರಧಾನಿ ಮೋದಿ ಹಿಟ್ಲರ್ನ ಅಪ್ಪನ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ವಿರೋಧಿಗಳನ್ನು ಹಣಿಯಲು ಐಟಿ ದಾಳಿಗಳನ್ನು ಮಾಡಿಸುತ್ತಿದ್ದಾರೆ. ಹಿಂದೆಂದೂ ಕಂಡರಿಯದ ದ್ವೇಷದ ರಾಜಕಾರಣ ಈಗ ನಡೆಯುತ್ತಿದೆ. ವಿರೋಧಿಗಳನ್ನು ಬಗ್ಗುಬಡಿಯಲು ದೇಶಾದ್ಯಂತ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪಗೆ ತಿರುಗೇಟು:
ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂಬ ಯಡಿಯೂರಪ್ಪ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಮುಖ್ಯಮಂತ್ರಿ ಆಗೋದು ಇರಲಿ, ಸದ್ಯ ಇರುವ ರಾಜ್ಯಾಧ್ಯಕ್ಷ ಸ್ಥಾನದಲ್ಲಿಯೂ ಮುಂದುವರೆಯಲ್ಲ. ಈಗಾಗಲೇ ಇವರನ್ನು ಕೆಳಗಿಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಹೀಗಿರಬೇಕಾದರೆ ಯಡಿಯೂರಪ್ಪ ಸಿಎಂ ಆಗೋ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಪ್ರತ್ಯೇಕ ಧರ್ಮ ಮುಗಿದ ಅಧ್ಯಾಯ:
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಮುಗಿದ ಅಧ್ಯಾಯ. ಲಿಂಗಾಯತ - ವೀರಶೈವ ಎಲ್ಲಾ ಒಂದೇ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಹೊಡೆದಾಟ, ಬಡೆದಾಟ ಏನಿದ್ದರೂ ಸ್ವಾಮಿಗಳದ್ದೇ ನಡೆಯುತ್ತಿವೆ. ವೀರಶೈವ ಲಿಂಗಾಯತ ಜನರ ನಡುವೆ ಯಾವುದೇ ಭಿನ್ನಮತ ಇಲ್ಲ. ಸ್ವಾಮಿಗಳನ್ನು ರಾಜಕೀಯದಿಂದ ದೂರ ಇಟ್ಟರೆ ಎಲ್ಲವೂ ಸರಿಯಾಗುತ್ತೆ. ಲೋಕಸಭೆ ಚುನಾವಣೆ ಹಿನ್ನೆಲೆ ಕಲಬುರಗಿಯಲ್ಲಿ ವೀರಶೈವ - ಲಿಂಗಾಯತ ಸಮಾವೇಶ ಮಾಡುತ್ತಿದ್ದೇವೆ ಎಂದರು.
ಇನ್ನು ವೀರಶೈವ - ಲಿಂಗಾಯತ ಎರಡೂ ಒಂದೇ ಎಂಬ ನಿರ್ಣಯ ಕೈಗೊಳ್ಳದಿದ್ದಲ್ಲಿ ಕಾಂಗ್ರೆಸ್ ವಿರುದ್ಧ ಮತ ಹಾಕುತ್ತೇವೆ ಎಂಬ ವೀರಶೈವ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಿವಶಂಕರಪ್ಪ, ಅವರು ಏನ್ ಪ್ಲಾನ್ ಮಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಆದ್ರೆ ನಾವೆಲ್ಲಾ ಒಂದಾಗಿದ್ದು, ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಖಂಡಿತಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.