ಕಲಬುರಗಿ: ಪಂಚಮಸಾಲಿ ಸಮಾಜದ ಮೂರನೇ ಪೀಠದ ಬಗ್ಗೆ ಮಾತನಾಡೋರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಪೀಠ ಯಾರ ವಿರುದ್ಧವಾಗಿ ಪ್ರಾರಂಭವಾಗ್ತಿಲ್ಲ. ನಿರಾಣಿ ಹಿತಾಸಕ್ತಿಗೆ ಮೂರನೇ ಪೀಠ ಸ್ಥಾಪನೆ ಅನ್ನೋದು ಸತ್ಯಕ್ಕೆ ದೂರವಾದ ಸಂಗತಿ. ಎರಡನೇ ಪೀಠ ಏಕೆ ಹುಟ್ಟಿತು ಅನ್ನೋ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಮೂರನೇ ಪೀಠಾರೋಹಣದ ಸಿದ್ಧತೆ ನಡೆದಿದ್ದು ಈ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ರಾಜಕೀಯ ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಕೂಡಲಸಂಗಮ ಪೀಠದ ಸ್ವಾಮೀಜಿಗಳಿಗೂ ಕೂಡಾ ಆಹ್ವಾನ ನೀಡಲಾಗಿದೆ. ಆದರೆ, ಅವರ ಆಗಮನದ ಬಗ್ಗೆ ಖಚಿತವಾಗಿಲ್ಲ.
ಇದನ್ನೂ ಓದಿ: ಫೆ. 14 ರಿಂದ ಅಧಿವೇಶನ: ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ
ಇನ್ನು ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರ ಸದ್ಯ ಕೋರ್ಟ್‌ನಲ್ಲಿದೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದು ಸಿಎಂ ಅವರ ಪರಮಾಧಿಕಾರ ಎಂದು ನಿರಾಣಿ ಅಭಿಪ್ರಾಯಪಟ್ಟರು.