ಕಲಬುರಗಿ: ಕೊವಿಡ್-19 ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರನ್ನ ಜಿಲ್ಲೆಗೆ ಕರೆ ತರುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದೆ. ಈ ವಿಷಯದಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಮೂಲಭೂತ ಹಕ್ಕು ಪ್ರತಿಪಾದಿಸುವ ಸಂವಿಧಾನದ ಆರ್ಟಿಕಲ್ 14, 19 ಹಾಗೂ 21ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ರಿಟ್ನಲ್ಲಿ ವಾದ ನಮೂದಿಸಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಚ್ 24ರಂದು ಮೊದಲು 21 ದಿನಗಳಿಗಾಗಿ ಲಾಕ್‌ಡೌನ್ ವಿಧಿಸಿತ್ತು. ಆನಂತರ ಏಪ್ರಿಲ್ 14 ಹಾಗೂ ಮೇ 3ರಂದು ಲಾಕ್‌ಡೌನ್ ವಿಸ್ತರಿಸಲಾಗಿದೆ. ಪರಿಣಾಮವಾಗಿ ರಾಜ್ಯದ ಬೆಂಗಳೂರು ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಅಸಂಖ್ಯಾತ ಕನ್ನಡಿಗ ಕೂಲಿ ಕಾರ್ಮಿಕರು ಉದ್ಯೋಗ ಕಳೆದುಕೊಂಡು ತೀವ್ರ ಸಂಕಷ್ಟ ಅನುಭವಿಸಿದರು. ಸಂಕಷ್ಟದಲ್ಲಿರುವರನ್ನ ಕರೆ ತರಲು ಸಿಎಂ ಅವರಿಗೆ ಪತ್ರ ಬರೆಯಲಾಗಿತ್ತು.
ಮೇ 9ರಂದು ಎನ್ಇಕೆಆರ್ಟಿಸಿ ಎಂಡಿ ಅವರಿಗೆ ಪತ್ರ ಬರೆದು ಬಸ್ ವ್ಯವಸ್ಥೆ ಕಲ್ಪಿಸಿ, ಅದಕ್ಕೆ ತಗಲುವ ಸಾರಿಗೆ ವೆಚ್ಚವನ್ನ ಕೆಪಿಸಿಸಿ ಭರಿಸುವುದಾಗಿಯೂ ಕೂಡಾ ಪತ್ರದಲ್ಲಿ ನಮೂದಿಸಲಾಗಿತ್ತು. ಎಂಡಿ ಅವರು ಕಲಬುರಗಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಕ್ತ ಆದೇಶಕ್ಕಾಗಿ ಕೋರಿದ್ದರು. ಜಿಲ್ಲಾಧಿಕಾರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸೂಕ್ತ ನಿರ್ದೇಶನಕ್ಕಾಗಿ ಕೋರಿದ್ದರು. ಆದರೂ ಕೂಡಾ ವಲಸಿಗರ ವಾಪಸಾತಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಅರ್ಜಿಯ ಮೂಲಕ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಈ ನಡುವೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಕಾರ್ಮಿಕರು ಬಂದಾಗ ಚೆಕ್ ಪೋಸ್ಟ್ಗಳಲ್ಲಿ ತಡೆದು ರಾಜ್ಯದ ಗಡಿಯೊಳಗೆ ಬಿಡದೆ ಅವರಿಗೆ ಊಟ-ವಸತಿ ವ್ಯವಸ್ಥೆ ಕಲ್ಪಿಸದೆ ರಾಜ್ಯ ಸರ್ಕಾರ ತೋರಿದ ನಿರ್ಲಕ್ಷ್ಯತನದಿಂದಾಗಿ ಮಹಿಳೆಯರು, ವೃದ್ಧರು, ಮಕ್ಕಳು ತುಂಬಾ ತೊಂದರೆ ಅನುಭವಿಸಿದರು. ಇದು ಸಂವಿಧಾನದ ಆರ್ಟಿಕಲ್ 14, 19, 21ರ ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೆ ನೀಡಿದ ಜೀವಿಸುವ ಹಕ್ಕು ಹಾಗೂ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಮ್ಮ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.