ಕಲಬುರಗಿ: ಲೋಕಪಾಲರ ನೇಮಕ ಕೇವಲ ಚುನಾವಣೆ ಗಿಮಿಕ್ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಕಲ್ಬುರ್ಗಿಯಲ್ಲಿ ಮಾತನಾಡಿದ ಅವರು 50 ವರ್ಷ ಲೋಕಪಾಲರ ನೇಮಕ ಮಾಡದೇ ಇದ್ದವರು ಚುನಾವಣೆ ಸಂದರ್ಭದಲ್ಲಿ ನೇಮಿಸಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಭರವಸೆ ನೀಡಿದಂತೆ ಎಲ್ಲವನ್ನು ಮಾಡಿದ್ದೇನೆ ಎಂದು ತೋರಿಸಲು ಲೋಕಪಾಲ ಆಸ್ತಿತ್ವಕ್ಕೆ ತರುತ್ತಿದ್ದಾರೆ. ತೋರಿಕೆಗಾಗಿ ಮೋದಿ ಲೋಕಪಾಲರ ನೇಮಕ ಮಾಡುತ್ತಿದ್ದು, ಇಷ್ಟು ಕಾಲ ಏಕೆ ಮಾಡಲಿಲ್ಲ ಎಂಬುದಕ್ಕೆ ಮೋದಿ ಕಾರಣ ಕೊಡಲಿ ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಲೋಕ್ಪಲ್ನಲ್ಲಿ ವಿರೋಧ ಪಕ್ಷದವರಿಗೆ ಸದಸ್ಯರಾಗಿಸಬೇಕೆಂಬ ಬೇಡಿಕೆ ಇತ್ತು. ಆದರೆ, ಲೋಕಪಾಲ ನೇಮಕ ಬದ್ಧತೆಯಿಂದ ಮಾಡಿಲ್ಲ. ಭ್ರಷ್ಟಾಚಾರ ತಡೆಗಟ್ಟುವುದಾಗಿ ಹೇಳುತ್ತಾರೆ. ಆದರೆ ಲೋಕಪಾಲ ನೇಮಕ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸುತ್ತಾರೆ. ಆದರೀಗ ಇದ್ದಕ್ಕಿದ್ದಂತೆ ನೇಮಕ ಪ್ರಕ್ರಿಯೆ ಮಾಡಲೊರಟಿರುವುದು ಚುನಾವಣೆ ಗಿಮಿಕ್ ಬಿಟ್ಟರೆ ಬೇರೇನೂ ಅಲ್ಲ ಎಂದು ಖರ್ಗೆ ಅಭಿಪ್ರಾಯಪಟ್ಟರು.
ಇನ್ನು ಇದೇ ವೇಳೆ ಮಾತನಾಡಿದ ಅವರು, ನಾನು ಚೌಕಿದಾರ ಎಂದು ಹೇಳಿಕೊಳ್ಳುವ ಮೋದಿ ಜನರ ಹಣ ಲೂಟಿ ಮಾಡಿ ಕಾರ್ಪೊರೇಟ್ ಸಂಸ್ಥೆಗಳಿಗೆ ಹಂಚಿದ್ದಾರೆ. ಇದೀಗ ಮೈ ಚೌಕಿದಾರ್ ಹು ಎಂದು ತಮಗೆ ತಾವೇ ಹೇಳಿಕೊಂಡಿದ್ದಾರೆ. ಅವರು ಏನು ಬೇಕಾದರೂ ಹೆಸರಿಟ್ಟುಕೊಳ್ಳಲಿ. ಆದರೆ, ಈ ಚೌಕಿದಾರ ದೇಶದ ರಕ್ಷಣೆ ಮಾಡಬೇಕಿತ್ತು. ಜನರ ಕಲ್ಯಾಣಕ್ಕೆ ಶ್ರಮಿಸಬೇಕಿತ್ತು ಬದಲಿಗೆ ದೇಶದ ಹಣವನ್ನು ಕೊಳ್ಳೆ ಹೊಡೆದು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ ಎಂದು ಗುಡುಗಿದರು.
ಚುನಾವಣೆ ಬಂದಿದೆ ಎಂದು ರೈತರ ಖಾತೆಗಳಿಗೆ ಎರಡು ಸಾವಿರ ರೂ.ಗಳನ್ನು ಬಿಡುಗಡೆಗೊಳಿಸಿದ್ದಾರೆ. ಒಬ್ಬ ರೈತನಿಗೆ ಪ್ರತಿ ದಿನಕ್ಕೆ 16.40 ರೂಪಾಯಿ ಸಿಗಲಿದೆ, ಇದರಿಂದ ಒಂದು ಚಹಾ ಸಿಗೋದು ಕಷ್ಟ. ನಾನು ರೈತಪರ ಎಂದು ಹೇಳಿಕೊಳ್ಳುತ್ತಲೆ ಕಾರ್ಪೊರೇಟ್ ಸಂಸ್ಥೆಗಳ ಪರ ನಿಲ್ಲುತ್ತಾರೆ. ಹೀಗಿರಬೇಕಾದರೆ ಮೈ ಚೌಕಿದಾರ್ ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಮೈ ಚೌಕಿದಾರ ಅಭಿಯಾನಕ್ಕೆ ಖರ್ಗೆ ಟಾಂಗ್ ನೀಡಿದರು.