ಕಲಬುರಗಿ : ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಖಜೂರಿ ಮಠಕ್ಕೆ ಮಹಿಳಾ ಉತ್ತರಾಧಿಕಾರಿ ನೇಮಕ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ.
ಶತಮಾನದ ಇತಿಹಾಸ, ಲಕ್ಷಾಂತರ ಜನ ಭಕ್ತ ಸಮೂಹ ಹೊಂದಿರುವ ಕೋರುಣೇಶ್ವರ ಮಠ ಇದೀಗ ತಲೆ ತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯ ಮುರಿದು ಮಾದರಿ ಕಾರ್ಯ ಮಾಡುವ ಮೂಲಕ ಸುದ್ದಿಯಲ್ಲಿದೆ.
ಖಜೂರಿ ಗ್ರಾಮದ ಕೋರುಣೇಶ್ವರ ಮಠಕ್ಕೆ 40 ವರ್ಷದ ನೀಲೋಚನಾ ತಾಯಿ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಮಠದ ಪ್ರಸ್ತುತ ಪೀಠಾಧಿಪತಿಗಳಾಗಿರುವ ಮರುಗೇಂದ್ರ ಕೋರುಣೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಉತ್ತರಾಧಿಕಾರಿ ನೇಮಕ ಸಂಪ್ರದಾಯವನ್ನ ಭಕ್ತರ ಸಮ್ಮುದಲ್ಲಿ ಮಾಡಲಾಗಿದೆ.
ಕಳೆದ ವರ್ಷ ಇಸ್ಲಾಂ ಧರ್ಮಕ್ಕೆ ಸೇರಿದವರೊಬ್ಬರನ್ನು ಶಾಖಾ ಮಠವೊಂದಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಮೂಲಕ ಹಳೆಯ ಕಟ್ಟಳೆಗಳನ್ನೆಲ್ಲ ಮುರಿದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿತ್ತು.
ಇದೀಗ ಮಹಿಳೆಯನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸುವ ಮೂಲಕ ಚಿತ್ರದುರ್ಗದ ಮುರುಘಾ ಮಠದ ವ್ಯಾಪ್ತಿಯಲ್ಲಿ ಬರುವ ಖಜೂರಿ ಮಠ ಶಿವಮೂರ್ತಿ ಮುರುಘಾ ಶರಣರ ರೀತಿಯಲ್ಲಿಯೇ ಕ್ರಾಂತಿಕಾರಕ ಹೆಜ್ಜೆಗಳನ್ನು ಇರಿಸಲಾರಂಭಿಸಿದೆ.
ಉತ್ತರಾಧಿಕಾರಿ ನೀಲೋಚನಾ ತಾಯಿ ವಿವರ : ಖಜೂರಿ ಗ್ರಾಮದವರೇ ಆದ ಮಥುರಾಬಾಯಿ ಮತ್ತು ಹನುಮಂತಪ್ಪ ನಗರೆ ದಂಪತಿಗೆ ಜನಿಸಿದ ನೀಲೋಚನಾ ಅವರು ಮಹಾರಾಷ್ಟ್ರದ ಉಮರ್ಗಾ ಜಿಲ್ಲೆಯ ಮುರುಮ್ ಗ್ರಾಮದಲ್ಲಿ 10ನೇ ತರಗತಿವರೆಗೆ ಮರಾಠಿಯಲ್ಲಿ ಶಾಲೆ ಕಲಿತಿದ್ದಾರೆ.
ಅವರನ್ನು 1997ನೇ ಸೆಪ್ಟೆಂಬರ್ 28 ರಂದು ಖಜೂರಿ ಮಠಕ್ಕೆ ಬಿಡಲಾಗಿತ್ತು. ಬಳಿಕ 2000-2004 ವರೆಗೆ ಚಿತ್ರದುರ್ಗದ ಮರುಘಾ ಮಠದಲ್ಲಿ ಶಿವಮೂರ್ತಿ ಮುರುಘಾ ಶರಣರು ಸಾಧಕ, ಬೋಧಕ ಮತ್ತು ಸುಧಾರಕ ತರಬೇತಿ ನೀಡಿದರು.
2005ಕ್ಕೆ ಖಜೂರಿ ಗ್ರಾಮಕ್ಕೆ ಮರಳಿದ ನೀಲೋಚನಾ ತಾಯಿ, ನಿಜ ಶರಣೆ ವಸತಿ ಶಾಲೆ ಆರಂಭಿಸಿ ಮಕ್ಕಳಿಗೆ ಉತ್ತಮ ಬೋಧನೆ, ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಂಘದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಇದೀಗ ಅವರನ್ನು ಖಜೂರಿ ಕೋರುಣೇಶ್ವರ ಮಠದ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ.