ಕಲಬುರಗಿ : ಮಹಾನಗರ ಪಾಲಿಕೆಯಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಹಿನ್ನಡೆಯಾಗಿದೆ. ಪಾಲಿಕೆಯ ವಾರ್ಡ್ ಸಂಖ್ಯೆ 24 ರ ಬಿಜೆಪಿ ಸದಸ್ಯೆ ಪ್ರಿಯಾಂಕ್ ಅಂಬ್ರೇಶ ಅವರ ಆಯ್ಕೆಯನ್ನು ಜಿಲ್ಲಾ ನ್ಯಾಯಾಲಯ ಅಸಿಂಧುಗೊಳಿಸಿ ಆದೇಶಿಸಿದೆ.
2021ರ ಸೆಪ್ಟೆಂಬರ್‌ನಲ್ಲಿ ಮಹಾನಗರ ಪಾಲಿಕೆಯ ಚುನಾವಣೆ ನಡೆದಿತ್ತು. ಈ ಸಂದರ್ಭದಲ್ಲಿ ವಾರ್ಡ್ ಸಂಖ್ಯೆ 24 ರಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಪ್ರಿಯಾಂಕಾ ಅವರ ವಯಸ್ಸು 20 ಇದ್ದರೂ 21 ಎಂದು ಚುನಾವಣಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅವರ ಆಯ್ಕೆ ಕಾನೂನು ಬಾಹಿರವಾಗಿದ್ದು ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಸೈಯದಾ ನೂರ್ ಫಾತಿಮಾ ಜಿಲ್ಲಾ ನ್ಯಾಯಾಲಯದಲ್ಲಿ ಚುನಾವಣೆಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶರಾದ ಸಿ.ಡಿ.ಖರೋಷಿ ಪ್ರೀಯಾಂಕಾ ಅವರ ಸದಸ್ಸತ್ವವನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೈಯದಾ ನೂರದ ಫಾತಿಮಾ ಅವರು ವಿಜಯಶಾಲಿ ಎಂದು ಘೋಷಿಸುವಂತೆ ನ್ಯಾಯಾಲಯ ಸೂಚಿಸಿದೆ.
ಮಹಾನಗರ ಪಾಲಿಕೆಯಲ್ಲಿ ಒಟ್ಟು 55 ಸದಸ್ಯ ಸ್ಥಾನಗಳಿದ್ದು, 27 ಕಾಂಗ್ರೆಸ್, 24 ಬಿಜೆಪಿ ಹಾಗೂ 4 ಜನರು ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ನ್ಯಾಯಾಲಯದ ಆದೇಶದಿಂದ ಬಿಜೆಪಿಯ ಶಕ್ತಿ ಮತ್ತಷ್ಟು ಇಳಿಕೆ ಕಂಡಿದೆ. ಆದರೆ ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಬಿಜೆಪಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲಾ ನ್ಯಾಯಾಲಯದಲ್ಲಿ ನಮ್ಮ ಕೇಲ ಲೋಪದೋಷದಿಂದ ನಮಗೆ ನ್ಯಾಯ ಸಿಕ್ಕಿಲ್ಲ, ಹೈಕೋರ್ಟ್‌ನಲ್ಲಿ ಸಮರ್ಪಕವಾಗಿ ಹೋರಾಡಿ ಗೇಲ್ಲುತ್ತೇವೆ ಎಂಬ ವಿಶ್ವಾಸ ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ 142 ಕೋಟಿ ರೂ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ