ಕಲಬುರಗಿ: ಕಲ್ಯಾಣ ಕರ್ನಾಟಕದ ಜನರು ಪ್ರವಾಹದಿಂದ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಆದರೂ ಕೂಡ ಪ್ರಧಾನಮಂತ್ರಿ ಕರ್ನಾಟಕವನ್ನು ಕಡೆಗಣಿಸುತ್ತಿದ್ದಾರೆಂದು ಕನ್ನಡ ಚಳವಳಿ ವಾಟಾಳ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ತಮಿಳುನಾಡು, ಕೇರಳ, ಉತ್ತರಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಮಾತ್ರ ಇವೆ ಎಂದುಕೊಂಡಿದ್ದಾರೆ. ರಾಜ್ಯದಲ್ಲಿನ ಸಂಕಷ್ಟ ಗಮನಕ್ಕೆ ತಂದು ಪ್ರಧಾನಿ ಅವರ ಗಮನ ಸೆಳೆಯುವಲ್ಲಿಯೂ ಸಚಿವರು ವಿಫಲರಾಗಿದ್ದಾರೆ. ಸಿಎಂ ಯಡಿಯೂರಪ್ಪ ಏನೂ ಮಾಡ್ತಿಲ್ಲ, ಅವರಿಗೆ ಯಾರ ಮೇಲೂ ನಂಬಿಕೆಯಿಲ್ಲ. ಸಿಎಂ ವೈಮಾನಿಕ ಸಮೀಕ್ಷೆ ಮಾಡಿದ ತಕ್ಷಣ ಎಲ್ಲಾ ಬಗೆಹರಿಯಲ್ಲ. ನೆರೆ ಪರಿಹಾರಕ್ಕೆ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯದಿಂದ ಬಿಜೆಪಿಯ 25 ಸಂಸದರು ಇದ್ದರೂ ಯಾವುದಕ್ಕೂ ಪ್ರಯೋಜನವಿಲ್ಲ. ಇನ್ನಾದರೂ ರಾಜ್ಯದಲ್ಲಿನ ಸಮಸ್ಯೆಗಳನ್ನು ಸಂಸದರು ಪ್ರಧಾನಿ ಗಮನಕ್ಕೆ ತಂದು ಸೂಕ್ತ ಪರಿಹಾರ ತರಲು ಮುಂದಾಗಲಿ. ನವೆಂಬರ್ ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಎಲ್ಲಾ ಕನ್ನಡಪರ ಸಂಘಟನೆಗಳು ಸೇರಿ ಹೋರಾಟ ಮಾಡುತ್ತೇವೆ ಎಂದರು.