ಕಲಬುರಗಿ: ಅಫಜಲಪುರ ಮತ್ತು ಬಳ್ಳೂರಗಿ ನಡುವಿನ ರಸ್ತೆಯ ಹಳ್ಳೋರಿ ಕ್ರಾಸ್ ಬಳಿ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ನವವಿವಾಹಿತೆ ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ನೇಪಾಳ ದೇಶದ ಸುರಕೇತ ಮೂಲದ ಹಾಗೂ ಸದ್ಯ ನಾಲ್ಕು ವರ್ಷಗಳಿಂದ ಅಫಜಲಪುರ ಪಟ್ಟಣದಲ್ಲಿ ವಾಸವಾಗಿದ್ದ ರತನ್ (25), ಇವರ ಪತ್ನಿ ಅಸ್ಮಿತ್ (21), ಇವರ ಮಕ್ಕಳಾದ ಮಿಲನ್ (5), ಧರಕನ್ (2) ಹಾಗೂ ಅಸ್ಮಿತ್ ಅವರ ಸಹೋದರಿ ಸ್ವಸ್ತಿಕಾ ಮೃತ ದುರ್ದೇವಿಗಳು. ಮೃತ ಸ್ವಸ್ತಿಕಾಳ ಮದುವೆ ಕಳೆದ ಹತ್ತು ದಿನಗಳ ಹಿಂದಷ್ಟೇ ರತನ್ ಸಹೋದರನೊಂದಿಗೆ ನೇರವೇರಿತ್ತು ಎಂದು ತಿಳಿದು ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ರತನ್ ದಂಪತಿ ಅಫಜಲಪುರ ಪಟ್ಟಣದಲ್ಲಿ ಫಾಸ್ಟ್ ಫುಡ್ ಅಂಗಡಿ ಇಟ್ಟುಕೊಂಡು ಉಪಜೀವನ ನಡೆಸುತ್ತಿದ್ದರು. ಪಕ್ಕದ ಮಹಾರಾಷ್ಟ್ರದ ಧುದನಿಯಲ್ಲಿ ಇವರ ಸಂಬಂಧಿಕರೊಬ್ಬರಿಗೆ ಅನಾರೋಗ್ಯಕ್ಕೆ ಈಡಾದ ಕಾರಣ ಮಾತನಾಡಿಸಿಕೊಂಡು ಬರಲು ಐವರು ಬೈಕ್ ಮೇಲೆ ತೆರಳಿದ್ದರು.
ಅನಾರೋಗ್ಯ ಪೀಡಿತ ಸಂಬಂಧಿಯನ್ನು ಮಾತನಾಡಿಸಿಕೊಂಡು ಮರಳಿ ಐವರು ಒಂದೇ ಬೈಕ್ನಲ್ಲಿ ವಾಪಸ್ ಆಗುವಾಗ ಲಾರಿ ಹಾಗೂ ಬೈಕ್ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಡಿಕ್ಕಿ ರಬಸಕ್ಕೆ ಮೃತ ದೇಹಗಳು ರಸ್ತೆ ತುಂಬೆಲ್ಲಾ ಚಿದ್ರಗೊಂಡು ಬಿದಿದ್ದವು. ಕಲಬುರಗಿ ಧುದನಿ ಸೇರಿದಂತೆ ಸುತ್ತಮುತ್ತಲಿನಲ್ಲಿ ವಾಸವಿರುವ ನೇಪಾಳಿ ಕುಟುಂಬಗಳು ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿ ಮಮ್ಮಲ ಮರಗಿದರು.
ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ರಸ್ತೆ ಹೋಕರು ಸಹ ದಂಪತಿ ಮತ್ತು ಮಕ್ಕಳ ದಾರುಣ ಸ್ಥಿತಿ ನೋಡಿ ಕಣಂಚಿನಲ್ಲಿ ನೀರು ಹಾಕಿದ್ದಾರೆ. ಇನ್ನು ಅಪಘಾತಕ್ಕೆ ಒಂದೇ ಬೈಕ್ನಲ್ಲಿ ಐವರು ಹೋಗಿದ್ದು ಕಾರಣ ಎನ್ನಲಾಗುತ್ತಿದೆ. ಸುದ್ದಿ ತಿಳಿದು ಸ್ಥಳಕ್ಕೆ ಎಸ್ಪಿ ಆಡೂರು ಶ್ರೀನಿವಾಸಲು ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದು, ಈ ಕುರಿತು ಅಫಜಲಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ತುಮಕೂರು... ಹಳೆಯ ವಸ್ತು ತುಂಬಿದ್ದ ಕೊಠಡಿಗೆ ಬೆಂಕಿ : ಒಬ್ಬನ ಸಜೀವದಹನ