ಕಲಬುರಗಿ: ಬೀದಿ ನಾಯಿಗಳ ಹಿಂಡೊಂದು ಮೃತ ವೃದ್ಧೆಯ ದೇಹವನ್ನು ಕಿತ್ತು ತಿಂದಿರುವ ಘಟನೆ ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದ ಸುಕ್ಷೇತ್ರ ಗಾಣಗಾಪುರದ ದ್ಯಾವಮ್ಮನ ಗುಡಿ ಹತ್ತಿರ ನಡೆದಿದೆ.
ಬೀದಿಬದಿ ಮೃತಪಟ್ಟ ಅನಾಥೆ ವೃದ್ಧೆಯೊಬ್ಬರ ಮೃತ ದೇಹವನ್ನು ಅಂತ್ಯಕ್ರಿಯೆ ಮಾಡದೆ ಅಲ್ಲೆ ಬಿಟ್ಟಿರುವ ಹಿನ್ನೆಲೆ, ನಾಯಿಗಳ ಹಿಂಡು ಮೃತ ದೇಹದ ಮೇಲೆ ದಾಳಿ ನಡೆಸಿ ದೇಹದ ಅನೇಕ ಭಾಗಗಳನ್ನು ಭಕ್ಷಣೆ ಮಾಡಿವೆ. ಮೃತ ವೃದ್ಧೆ ನಿರ್ಗತಿಕರಾಗಿದ್ದು, ಬೀದಿ ಬದಿಯಲ್ಲಿ ವಾಸ ಮಾಡುತ್ತಿದ್ದರು ಎನ್ನಲಾಗ್ತಿದೆ.
ಇನ್ನು, ದೇವಸ್ಥಾನದ ಬಳಿ ನಾಯಿಗಳ ಹಿಂಡು ಹೆಚ್ಚಾಗಿದ್ದು, ಭಕ್ತರು ಭಯದಿಂದ ದೇವಸ್ಥಾನಕ್ಕೆ ಬರುವಂತಾಗಿದೆ. ಮಾಂಸದ ರುಚಿಯನ್ನು ಕಂಡಿರುವ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡಬಲ್ಲವು. ಹಾಗಾಗಿ ಬರುವಂತಹ ಭಕ್ತರ ಸುರಕ್ಷಿತ ದೃಷ್ಠಿಯಿಂದಾಗಿ ನಾಯಿಗಳನ್ನು ಸ್ಥಳಾಂತರ ಮಾಡಬೇಕು. ಸದ್ಯ ನೂರಾರು ಜನ ನಿರ್ಗತಿಕರು ಇಲ್ಲಿನ ಸಂಗಮದಲ್ಲಿ ಠಿಕಾಣಿ ಹೂಡಿದ್ದು, ಅವರಿಗೆ ಸೂಕ್ತ ರಕ್ಷಣೆ ಸಿಗಬೇಕಿದೆ.
ಸರ್ಕಾರದಿಂದ ನಿರ್ಗತಿಕರ ಆಶ್ರಮ ನಿರ್ಮಿಸಿ ದೇಗುಲದ ಹೆಸರಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಿದೆ ಎಂದು ಸ್ಥಳೀಯರು ಮತ್ತು ನಿರ್ಗತಿಕರು ಧರ್ಮಿಕ ದತ್ತಿ ಇಲಾಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ವಿದ್ಯಾರ್ಥಿ ಮೇಲೆ ಬೀದಿ ನಾಯಿ ದಾಳಿ: ಬಾಲಕನಿಗೆ ಗಂಭೀರ ಗಾಯ