ಕಲಬುರಗಿ : ಯುವತಿಯನ್ನು ಕೈಹಿಡಿದು ಎಳೆದಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶುರುವಾದ ದ್ವೇಷದಿಂದ ಯುವಕನನ್ನು ರಾಡಿನಿಂದ ಹೊಡೆದು, ಮುಖದ ಮೇಲೆ ಕಲ್ಲು ಎತ್ತಿ ಹಾಕಿ, ಕೊಲೆ ಮಾಡಿದ ಭೀಕರ ಘಟನೆ ಅಫಜಲಪುರ ತಾಲೂಕಿನ ಚೌಡಾಪುರದಲ್ಲಿ ನಡೆದಿದೆ.
ಚಿಣಮಗೇರಾ ಗ್ರಾಮದ ಮಹಾಂತಪ್ಪ ಗಂಡೋಳಿ (26) ಕೊಲೆಯಾದ ಯುವಕ. ಪ್ರಶಾಂತ ಅಲಿಯಾಸ್ ಪರಸು ಆಲಮೇಲ್ ಮತ್ತು ದಶರಥ ನೀಲೂರಕರ್ ಎಂಬ ಇಬ್ಬರ ವಿರುದ್ಧ ಮೃತನ ತಾಯಿ ಶಾಂತಮ್ಮ ಗಂಡೋಳಿ ಪ್ರಕರಣ ದಾಖಲಿಸಿದ್ದಾರೆ.
ಕೊಲೆಯಾದ ಮಹಾಂತಪ್ಪನ ಸೋದರಿಯನ್ನು ಈ ಹಿಂದೆ ಆರೋಪಿ ಪ್ರಶಾಂತ ಹೊಲದಲ್ಲಿ ಕೈಹಿಡಿದು ಎಳೆದಾಡಿದ್ದನಂತೆ. ಇದೇ ವಿಚಾರಕ್ಕೆ ಮಹಾಂತಪ್ಪ ಗಲಾಟೆ ಮಾಡಿ ಪ್ರಶಾಂತನಿಗೆ ಹೊಡೆದು ಕಾಲು ಮುರಿದಿದ್ದನಂತೆ. ಈ ಹಿನ್ನೆಲೆ ಇಬ್ಬರ ನಡುವೆ ದ್ವೇಷ ಹುಟ್ಟಿಕೊಂಡಿತ್ತು. ಈಗ ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ಶಾಂತಮ್ಮ ದೇವಲ ಗಾಣಗಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗ್ತಿದೆ. ಇನ್ನೊಬ್ಬ ಆರೋಪಿ ಪತ್ತೆಗೆ ಪಿಎಸ್ಐ ರಾಜಶೇಖರ ರಾಠೋಡ್ ಬಲೆ ಬೀಸಿದ್ದಾರೆ.
ನಕಲಿ ಇನ್‍ಸ್ಟಾಗ್ರಾಂ ಖಾತೆ ತೆರೆದು ಮಾನಹಾನಿ: ನಗರದ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಯುವತಿಯೋರ್ವಳ ಹೆಸರಿನಲ್ಲಿ ನಕಲಿ ಇನ್‍ಸ್ಟಾಗ್ರಾಂ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಯುವತಿ ಇನ್‍ಸ್ಟಾಗ್ರಾಂನಲ್ಲಿ ತನ್ನದೊಂದು ಖಾತೆ ತೆರೆದು ಫೋಟೋಗಳನ್ನು ಡಿಪಿಯಲ್ಲಿ ಇಟ್ಟಿದ್ದರು. ಕೆಲ ಅಪರಿಚಿತರು ಇವರ ಇನ್‍ಸ್ಟಾಗ್ರಾಂ ಪ್ರೊಫೈಲ್‍ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವಹೇಳನಕಾರಿಯಾದ ಬರಹ ಮತ್ತು ಪೋಸ್ಟ್ಗಳನ್ನು ಹಾಕಿದ್ದಾರೆ. ಅಲ್ಲದೆ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಯುವತಿಯ ಭಾವಚಿತ್ರ ಹಾಕಿ ಕಾಲ್ ಗರ್ಲ್ ಎಂದು ಅವಹೇಳನಕಾರಿ ಪೋಸ್ಟ್ಗಳನ್ನು ಮಾಡುತ್ತಿದ್ದರು. ಇದರಿಂದ ನೊಂದ ಯುವತಿ ಸಿಇಎನ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಮಹಿಳಾ ಬಸ್ ಕಂಡಕ್ಟರ್ ಮೇಲೆ ಹಲ್ಲೆ, ಜೀವ ಬೆದರಿಕೆ: ಮಹಿಳಾ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಫರತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆ ನಡೆಸಿ ನನಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಕಲಬುರಗಿ ಡಿಪೋ ನಂ.3ರ ಬಸ್ ಕಂಡಕ್ಟರ್ ಅಂಬಿಕಾ ಅವರು ಇಲ್ಲಿನ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಗಲಾಟೆ ವೇಳೆ ತಮ್ಮ ಜೇಬಿನಲ್ಲಿದ್ದ 1355 ರೂ. ಮತ್ತು ಕೊರಳಲ್ಲಿದ್ದ ಅರ್ಧ ತೊಲೆ ಮಂಗಳ ಸೂತ್ರ ಕಳೆದು ಹೋಗಿದೆ ಎಂದು ಅಂಬಿಕಾ ದೂರಿದ್ದಾರೆ.
ಇದನ್ನೂ ಓದಿ : Shivamogga crime: ಮನೆ ವಿಚಾರಕ್ಕೆ ಶಿವಮೊಗ್ಗದಲ್ಲಿ ಸಂಬಂಧಿಕರ ಗಲಾಟೆ; ಓರ್ವನ ಕೊಲೆ