ಕಲಬುರಗಿ: ತುಬಚಿ ಏತ ನೀರಾವರಿಯಿಂದ ಮಹಾರಾಷ್ಟ್ರದ ಬೋರಾ ನದಿಗೆ ನೀರು ಹರಿಸುವ ವಿಚಾರವಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ನೀಡಿದ್ದ ಹೇಳಿಕಗೆ ಇದೀಗ ಸ್ಪಷ್ಟನೆ ನೀಡಿದ್ದು, ಬೋರಾ ನದಿಗೆ ನೀರು ಹರಿಸುವುದಾಗಿ ಹೇಳಿಲ್ಲ ಎಂದಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಬೇಸಿಗೆ ದಿನಗಳಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕದ ಕೃಷ್ಣಾ ಮತ್ತು ಭೀಮಾ ನದಿಗೆ 4 ಟಿಎಂಸಿ ನೀರು ಹರಿಸುವದನ್ನು ಒಪ್ಪಂದ ಮಾಡಿಕೊಂಡರೆ, ಅದಕ್ಕೆ ಪರ್ಯಾಯವಾಗಿ ಯಾವ ರೀತಿಯ ಸಹಾಯ ಮಾಡಬಹುದು ಎಂದು ಚರ್ಚಿಸುವುದಾಗಿ ಹೇಳಿದ್ದೇನೆ. ಹೊರತಾಗಿ ಬಬಲೇಶ್ವರದ ತುಬಚಿ ನೀರು ಬೋರಾ ನದಿಗೆ ಹರಿಸುವುದಾಗಿ ಹೇಳಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಚುನಾವಣೆ ಪ್ರಚಾರದ ವೇಳೆ ತುಬಚಿಯಿಂದ ಬೋರಾ ನದಿಗೆ ನೀರು ಹರಿಸುವದಾಗಿ ನಿಎಸ್ವೈ ಹೇಳಿಕೆ ನೀಡಿದ್ದರಿಂದ ಇದಕ್ಕೆ ಎಲ್ಲಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ನೀರು ಹರಿಸುವ ಸೂಕ್ಷ್ಮ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ, ಬೇಸಿಗೆಯಲ್ಲಿ ಅವರು ಕರ್ನಾಟಕಕ್ಕೆ ನೀರು ಹರಿಸಲು ಒಪ್ಪಂದ ಮಾಡಿಕೊಂಡರೆ, ಇಲ್ಲಿನ ನೀರಿನ ಲಭ್ಯತೆ ನೋಡಿಕೊಂಡು ನಾವು ಯಾವ ರೀತಿಯಲ್ಲಿ ಸಹಾಯ ಅವರಿಗೆ ಎನ್ನುವುದನ್ನು ತೀರ್ಮಾನಕ್ಕೆ ಬರುತ್ತೆವೆ ಎಂದಿದ್ದೇನೆ ಎಂದರು. ರಾಜಕೀಯ ಗಿಮಿಕ್ ಎನ್ನುವುದು ಸರಿಯಲ್ಲ, ನನ್ನ ಜೀವನದಲ್ಲಿ ಹಿಂದೆಂದೂ ರಾಜಕೀಯ ಗಿಮಿಕ್ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ, ಇದರಲ್ಲಿ ಯಾವುದೇ ರೀತಿಯ ಗಿಮಿಕ್ ಇಲ್ಲ, ಅನಗತ್ಯವಾಗಿ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದಿದ್ದಾರೆ.