ಹಾವೇರಿ: ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ವೇಳೆ ಮರಣ ಪ್ರಮಾಣ ಅಧಿಕವಾಗಿತ್ತು. ಇದರ ಸತ್ಯಾಸತ್ಯತೆ ತಿಳಿಯಲು ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ನುರಿತ ತಜ್ಞರ ತನಿಖೆಗೆ ಒತ್ತಾಯಿಸಿದ್ದರು. ಪರಿಣಾಮ, ಹುಬ್ಬಳ್ಳಿಯ ಕಿಮ್ಸ್ ವೈದ್ಯರ ತಂಡ ಆಗಮಿಸಿ ತನಿಖೆ ನಡೆಸಿತ್ತು. ಇದೀಗ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣಗಳೇನು ಎಂದು ವರದಿ ಸಲ್ಲಿಸಿದೆ.
ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಬರೋಬ್ಬರಿ 440 ಜನ ಸಾವನ್ನಪ್ಪಿದ್ದರು. ಪರಿಣಾಮ ಹುಬ್ಬಳ್ಳಿಯ ಕಿಮ್ಸ್ ವೈದ್ಯರ ತಂಡ ಆಗಮಿಸಿ ಇಲ್ಲಿ ಮರಣ ಪ್ರಮಾಣ ಅಧಿಕವಾಗಲು ಕಾರಣ ಪತ್ತೆ ಮಾಡಿ, ಈ ಕುರಿತಂತೆ ವರದಿ ಸಲ್ಲಿಸಿದೆ. ವೈದ್ಯರೇ ಹೇಳುವಂತೆ ರಾತ್ರಿ ಶಿಫ್ಟ್‌ನಲ್ಲಿ ವೈದ್ಯರ ನಿರ್ಲಕ್ಷ್ಯ, ಆಮ್ಲಜನಕ ಕೊರತೆ, ಜನರು ರೋಗ ಬಾಧಿಸಿದ ಬಹಳ ದಿನಗಳ ನಂತರ ಆಸ್ಪತ್ರೆಗೆ ದಾಖಲಾಗುವುದು. ಸಕ್ಕರೆ ಕಾಯಿಲೆ ರೋಗಿಗಳಿಗೆ ಸಿಗದ ಚಿಕಿತ್ಸೆ ಸೇರಿದಂತೆ ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಮರಣ ಪ್ರಮಾಣ ಅಧಿಕವಾಗಿತ್ತು ಎಂದು ತಿಳಿದುಬಂದಿದೆ.
ಇನ್ನು ರಾಜ್ಯದಲ್ಲಿ ಮೂರನೇ ಅಲೆ ಭೀತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಕೋವಿಡ್ ಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ವಾತ್ಸಲ್ಯ ಯೋಜನೆಯಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಎರಡನೇ ಅಲೆ ವೇಳೆ ಮಾಡಿದ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಲು ಮುಂದಾಗಿದೆ.