ಹಾವೇರಿ: ಸಮ್ಮೇಳನ ವಿಚಾರವಾಗಿ ತೊಂದರೆ ನೀಡಬೇಕು ಎಂದು ನನ್ನ ಬಗ್ಗೆ ಆರೋಪಗಳು ಮಾಡಲಾಗುತ್ತಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಕುತಂತ್ರದ ಉದ್ದೇಶದಿಂದ ಈ ರೀತಿ ಆರೋಪ ಮಾಡುತ್ತಿರುವವರೆಲ್ಲಾ ಹಾವೇರಿಯ ವಿರೋಧಿಗಳು ಎಂದು ಜೋಶಿ ಅಭಿಪ್ರಾಯಪಟ್ಟರು.
ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ತೊಂದರೆಯಾಗಬೇಕು ಎಂಬ ಕುತಂತ್ರದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ಅವರಿಗೆ ನಾನು ಗೋವಿಂದ ಭಟ್ಟರ ಮರಿಮೊಮ್ಮಗನಲ್ಲ ಎಂದು ಹೇಳಲು ಏನು ಅಧಿಕಾರವಿದೆ ಎಂದು ಮಹೇಶ್ ಜೋಷಿ ಪ್ರಶ್ನಿಸಿದರು. ಈ ರೀತಿ ಆರೋಪ ಮಾಡುತ್ತಿರುವುದು ಸಂತ ಶಿಶುನಾಳ ಶರೀಫರಿಗೆ ಮತ್ತು ಗುರು ಗೋವಿಂದ ಭಟ್ಟರಿಗೆ ಅವರಿಗೆ ಅವಮಾನಿಸಿದ ಹಾಗೆ ಎಂದು ಜೋಷಿ ಆರೋಪಿಸಿದರು. ಹಲವು ದಶಕಗಳ ಹಿಂದೆ ಇದ್ದ ಗುರು ಗೋವಿಂದ ಭಟ್ಟರನ್ನ ಮತ್ತು ಶಿಶುನಾಳ ಶರೀಫ ಅವರನ್ನು ಜನ ಆಡಿಕೊಂಡಿದ್ದರು. ಅಂತದರಲ್ಲಿ ನನ್ನನ್ನ ಈ ಜನ ಬಿಡುತ್ತಾರ ಎಂದು ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಬೇಸರ ವ್ಯಕ್ತಪಡಿಸಿದರು.
ನಾನು ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಅಂದಿನಿಂದ ನಾನು ಶಿಶುನಾಳ ಶರೀಫರ ಗುರು ಗೋವಿಂದ ಭಟ್ಟರ ಮರಿಮೊಮ್ಮಗ ಎಂದು ಹೇಳುತ್ತಾ ಬಂದಿದ್ದೇನೆ. ಈ ರೀತಿ ಆರೋಪ ಮಾಡುತ್ತಿರುವವರು ಕ್ಷುಲ್ಲಕ ಮಾನವರು. ಈ ರೀತಿಯ ಜನಗಳಿಗೆ ಸ್ವತಃ ಶಿಶುನಾಳ ಶರೀಫರೇ ಕ್ಷುಲ್ಲಕ ಮಾನವರು ಎಂದಿದ್ದಾರೆ. ಅಂತಹುದರಲ್ಲಿ ನಾನು ಶರೀಫರ ಅನುಯಾಯಿ, ನಾನು ಸಹ ಅವರಿಗೆ ಕ್ಷುಲ್ಲಕ ಮಾನವರು ಎನ್ನುತ್ತೇನೆ ಎಂದು ಮಹೇಶ ಜೋಶಿ ಹೇಳಿದರು.
ನಾನು ಗುರು ಗೋವಿಂದ ಭಟ್ಟರ ಮರಿಮೊಮ್ಮಗ ಎಂದು ಹೇಳುತ್ತಾ ಬಂದಿದ್ದೇನೆ. ಮೊದಲೆಲ್ಲಾ ಪ್ರಶ್ನಿಸದ ಜನರು ಇದೀಗ ನನ್ನ ಗೋವಿಂದ ಭಟ್ಟರ ಮರಿಮೊಮ್ಮಗ ಅಲ್ಲ ಎನ್ನುತ್ತಿರುವ ಹಿಂದೆ ದುರುದ್ದೇಶವಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ. ಇದನ್ನ ಅವರು ದಾಖಲೆಗಳ ಮೂಲಕ ಸಾಬೀತುಪಡಿಸಬೇಕು. ನಾನು ಅವರನ್ನ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತೇನೆ ಎಂದು ಜೋಶಿ ಇದೇ ವೇಳೆ ಎಚ್ಚರಿಕೆ ನೀಡಿದರು.
ಪ್ರತಿವರ್ಷ ನಡೆಯುವ ಗೋವಿಂದ ಭಟ್ಟರ ಆರಾಧನೆಗೆ ನಾನು ಹೋಗುತ್ತೇನೆ ಅಷ್ಟೇ ಅಲ್ಲದೆ ಗುರು ಗೋವಿಂದ ಸೇವಾ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದೆ, ಈ ರೀತಿಯ ಆರೋಪ ವಿಷ ತುಂಬಿರುವಂತದ್ದು ಕುಚೇಷ್ಟೆ ಕುತಂತ್ರ ಇದೆ ಎಂದು ಜೋಷಿ ಆರೋಪಿಸಿದರು. ನಾನು 30 ವರ್ಷಗಳ ಹಿಂದೆ ದೂರದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಅವಾಗಲೆಲ್ಲಾ ನಾನು ಗುರು ಗೋವಿಂದ ಭಟ್ಟರ ಮರಿಮೊಮ್ಮಗ ಎಂತಲೇ ಪ್ರಸಾರವಾಗಿತ್ತು ಎಂದು ಜೋಶಿ ತಿಳಿಸಿದರು. ನಾನು ಅಧಿಕಾರದಲ್ಲಿರಲಿ, ಇಲ್ಲದಿರಲಿ ಗುರು ಗೋವಿಂದ ಭಟ್ಟರ ಮರಿಮೊಮ್ಮಗನೇ. ಅಗತ್ಯಬಿದ್ದರೆ ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಜೋಶಿ ಇದೇ ವೇಳೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಪ್ರತಿ ಕಂಬದಲ್ಲೂ ಕವಿ, ಸಾಹಿತಿಗಳ ಚಿತ್ರಣ.. 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುನ್ನುಡಿ ಬರೆದ ಹುಕ್ಕೇರಿಮಠ