ಹಾವೇರಿ: ಯುಟಿಪಿ ಕಾಲುವೆಗಳಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರ ದೊರೆತಿಲ್ಲ ಎಂದು ರಾಣೆಬೆನ್ನೂರಿನ ಯುಟಿಪಿ ಕಚೇರಿ ಮುಂದೆ ಕಳೆದ ಒಂದು ತಿಂಗಳಿನಿಂದ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ರಾಣೆಬೆನ್ನೂರು ಮತ್ತು ಹಿರೆಕೇರೂರು ತಾಲೂಕಿನ ನೂರಾರು ರೈತರು ನಗರದ ಯುಟಿಪಿ ಕಚೇರಿಯ ದ್ವಾರದ ಮುಂದೆ ಭೂ ಪರಿಹಾರಕ್ಕಾಗಿ ಒಂದು ತಿಂಗಳಿನಿಂದ ಪ್ರತಿಭಟನೆ ಕುಳಿತಿದ್ದರು. ಈ ಹಿಂದೆ ಸ್ವತಃ ಜಿಲ್ಲಾಧಿಕಾರಿ ಹಾಗೂ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಭೇಟಿ ನೀಡಿ ಒಂದು ವಾರದೊಳಗೆ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ, ಇದು ಪ್ರಯೋಜನವಾಗಲಿಲ್ಲ ಎಂದು ರೈತರು ಮತ್ತೆ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ಬಗ್ಗದ ರೈತರು ಖುದ್ದಾಗಿ ಸಚಿವರು ಬಂದು ಹೇಳಬೇಕೆಂದು ಹಠ ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕೃಷಿ ಸಚಿವ ಬಿ.ಸಿ.ಪಾಟೀಲ ಪ್ರತಿಭಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
ಬಳಿಕ ಮಾತನಾಡಿದ ಸಚಿವ ಪಾಟೀಲ್, ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಎಷ್ಟು ರೈತರಿಗೆ ಪರಿಹಾರ ಬರಬೇಕು ಎಂಬುದನ್ನು ಅಧಿಕಾರಿಗಳು ಮಾಹಿತಿ ನೀಡಬೇಕು. ಅಲ್ಲದೇ ಎರಡು ತಿಂಗಳೊಳಗೆ ಎಲ್ಲಾ ರೈತರಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದರು. ಸಚಿವರ ಭರವಸೆ ಹಿನ್ನೆಲೆ ರೈತರು ತಮ್ಮ ಅಹೋರಾತ್ರಿ ಧರಣಿ ಕೈ ಬಿಟ್ಟರು.