ಹಾವೇರಿ: ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ವರದಿಯಾಗಿಲ್ಲ. ಈ ಕುರಿತಂತೆ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕ್ವಾರಂಟೈನ್ ಅಧಿಕವಾಗುತ್ತಿದ್ದಂತೆ ಜನರ ರಕ್ತ ಮತ್ತು ಗಂಟಲು ದ್ರವ ತೆಗೆದುಕೊಳ್ಳುತ್ತಿದ್ದು, ಇದರಿಂದ ಜನರಲ್ಲಿ ಆತಂಕ ಮನೆ ಮಾಡುತ್ತಿದೆ. ಸಂಶಯಗೊಂಡ ಜನರು ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.
ಆದರೆ ಲ್ಯಾಬ್ ಫಲಿತಾಂಶದಿಂದ ಮಾತ್ರ ವ್ಯಕ್ತಿಗೆ ಪಾಸಿಟಿವ್ ಅಥವಾ ನೆಗಟಿವ್ ಇರುವುದು ತಿಳಿಯಲಿದೆ. ಈ ಕುರಿತಂತೆ ಜಿಲ್ಲಾಡಳಿತ ಸ್ಪಷ್ಟಪಡಿಸಲಿದ್ದು, ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ ಎಂದರು. ಬದಲಿಗೆ ಜನರು ಜಾಗೃತಿಯಿಂದ ಇರಬೇಕು. ಮನೆಯಲ್ಲಿ ಇರುವ ಮೂಲಕ ಕೊರೊನಾ ಚೈನ್ ಬೆಳೆಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಸುಳ್ಳು ಸುದ್ದಿ ಹರಡಿಸಿ ಜನರನ್ನ ಆತಂಕಕ್ಕೀಡು ಮಾಡುವವರ ಮೇಲೆ ಸೈಬರ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.