ಹಾವೇರಿ: ಸಂಸದ ಪ್ರತಾಪ್ ಸಿಂಹ ನಮಾಜ್ ವಿಚಾರವಾಗಿ ನೀಡಿರುವ ಹೇಳಿಕೆಗೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದು, ನಮ್ಮಲ್ಲಿ ದಿನಕ್ಕೆ ಐದು ಬಾರಿ ನಮಾಜ್ ಮಾಡಲು ಅವಕಾಶವಿದೆ. ನಮಾಜ್ ಮಾಡಲು ಎಲ್ಲಿ ಅವಕಾಶ ಸಿಗುತ್ತೋ ಅಲ್ಲಿ ಮಾಡಬಹುದಾಗಿದೆ. ಮನೆಯಲ್ಲಿ ಅವಕಾಶ ಸಿಕ್ಕರೂ ಮಾಡಬಹುದು ಎಂದಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹುಲಗೂರಿನ ಸೈಯದ್ ಹಜರತ್ ಷಾ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿದ ವೇಳೆ ಜಮೀರ್ ಈ ರೀತಿ ಹೇಳಿದ್ದಾರೆ. ಹಿಜಾಬ್ ಧರಿಸುವ ಪದ್ಧತಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅಷ್ಟು ದಿನಗಳಿಂದ ಇಲ್ಲದ ವಿರೋಧ ಈಗ್ಯಾಕೆ ಎಂದು ಜಮೀರ್ ಪ್ರಶ್ನಿಸಿದ್ದಾರೆ.
ಕೇಸರಿ ಶಾಲು ಧರಿಸುವ ಪದ್ಧತಿ ಯಾವಾಗಿನಿಂದ ಆರಂಭ ಆಗಿದೆ. ರಾಜಕೀಯ ಮಾಡಲು ಮಕ್ಕಳನ್ನು ಬಳಸಿಕೊಳ್ತಿದ್ದಾರೆ. ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತುತ್ತಿದ್ದಾರೆ. ಇದು ಮಕ್ಕಳಿಗೆ ಗೊತ್ತಾಗ್ತಿಲ್ಲ ಎಂದು ಜಮೀರ್ ಹೇಳಿದ್ದಾರೆ.
ಹೆಣ್ಣು ಮಕ್ಕಳ ರಕ್ಷಣೆಗೋಸ್ಕರ ಹಿಜಾಬ್: ಹಿಜಾಬ್ ಹಾಕೋದು ಹೆಣ್ಣು ಮಕ್ಕಳ ರಕ್ಷಣೆಗೋಸ್ಕರ. ಅವರ ಬ್ಯೂಟಿಯನ್ನು ಕಾಪಾಡಿಕೊಳ್ಳುವುದಕೋಸ್ಕರ. ಮುಂಚೆ ಹಾಫ್ ಹೆಲ್ಮೆಟ್ ಇತ್ತು, ಈಗ ಫುಲ್ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಇದರಿಂದ ನಮ್ಮ ಜೀವ ಉಳಿಯುತ್ತದೆ ಎಂದು ಹೀಗೆ ಮಾಡಿದ್ದಾರೆ. ಹಾಗೆ ಹೆಣ್ಣು ಮಕ್ಕಳಿಗೆ ರಕ್ಷಣೆ ಇರಲಿ ಅಂತಾ ಹಿಜಾಬ್ ಮಾಡಲಾಗಿದೆ ಎಂದು ಜಮೀರ್ ಸಮರ್ಥನೆ ಮಾಡಿಕೊಂಡಿದ್ದಾರೆ.
ಮಕ್ಕಳಿಗೆ ಕೇಸರಿ ಶಾಲು ಹಾಕಿ ರಾಜಕೀಯ ಲಾಭಕ್ಕೋಸ್ಕರ ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ. ನೂರಕ್ಕೆ ನೂರು ರಾಜಕೀಯಕ್ಕಾಗಿ ಇದನ್ನ ಮಾಡಲಾಗುತ್ತಿದೆ. ಈಗ ಎಲೆಕ್ಷನ್ ಹತ್ತಿರ ಬರ್ತಿದೆ ಅದಕ್ಕಾಗಿ ಹಿಂದೂ - ಮುಸ್ಲಿಂ ವಿಚಾರ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರಿಗೆ ಹೇಳಿಕೊಳ್ಳಲು ಅಭಿವೃದ್ಧಿ ಕೆಲಸಗಳಿಲ್ಲ ಎಂದು ಜಮೀರ್ ಆರೋಪಿಸಿದರು.
ಇದನ್ನೂ ಓದಿ: ಹಿಜಾಬ್ ಅರ್ಜಿಗಳ ವಿಚಾರಣೆ ಪ್ರಾರಂಭ.. ಮಾಧ್ಯಮಗಳು ಜವಾಬ್ದಾರಿಯಿಂದ ನಡೆದಕೊಳ್ಳಬೇಕು.. ಸಿಜೆ ಮನವಿ
ಜನರು ದಡ್ಡರಲ್ಲ 2023ರ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸ್ತಾರೆ. ಬಿಜೆಪಿಯವರಿಗೆ ನಾವು ಏನು ಟಾಂಗ್ ಕೊಡೋಕೆ ಆಗುತ್ತೆ, ನಾವು ಟಾಂಗ್ ಕೊಟ್ರೆ ಒಂದಕ್ಕೆ ಇನ್ನೊಂದು ಸೇರಿಸಿ ಹೇಳ್ತಾರೆ. ಅವರಿಗೆ ಬೇರೆ ವಿಷಯಗಳಿಲ್ಲ. ಜಮೀರ್ ಏನಾದ್ರೂ ಹೇಳಿದ್ರೆ ಅದಕ್ಕೊಂದು ಸೇರಿಸಿ ಮಾತಾಡ್ತಾರೆ ಎಂದು ಆರೋಪಿಸಿದರು.
ನಾನು ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದೇನೆ. ಸಿದ್ದರಾಮಯ್ಯ ಸೇಫರ್ ಸೈಡ್ಗಾಗಿ ಕ್ಷೇತ್ರ ಬಿಡ್ತಿದ್ದೇನೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಪರವಾಗಿ ಒಲವಿದೆ. ಹೀಗಾಗಿ ರಾಜ್ಯದ ಜನರ ಸೇವೆಗಾಗಿ ಕ್ಷೇತ್ರ ಬಿಟ್ಟುಕೊಡ್ತಿದ್ದೇನೆ. ನನ್ನ ಕ್ಷೇತ್ರ ಆಮೇಲೆ ನೋಡಿಕೊಳ್ಳೋಣ. ರಾಜ್ಯಕ್ಕೆ ಒಳ್ಳೆಯದಾಗಬೇಕೆಂದರೆ ಅದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಂತಾ ಜನರು ಮಾತಾಡ್ತಿದ್ದಾರೆ. ನನಗೆ ರಾಜ್ಯ ಮುಖ್ಯ, ರಾಜ್ಯಕ್ಕೋಸ್ಕರ ತ್ಯಾಗ ಮಾಡ್ತಿದ್ದೇನೆ. ನನಗೆ ಯಾವ ಕ್ಷೇತ್ರಾನೂ ಬೇಡವೇ ಬೇಡ. ರಾಜ್ಯಕ್ಕೆ ಮತ್ತು ಸಿದ್ದರಾಮಯ್ಯಗೆ ಒಳ್ಳೆಯದಾದರೆ ಸಾಕು ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.