ಹಾವೇರಿ: ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಎರಡೇ ದಿನದಲ್ಲಿ ಸುಮಾರು 96 ಮನೆಗಳಿಗೆ ಹಾನಿಯಾಗಿದೆ.
ಧರ್ಮಾ ನದಿಪಾತ್ರದಲ್ಲಿ 27 ಗ್ರಾಮಗಳು ಮತ್ತು ವರದಾ ನದಿ ಪಾತ್ರದ 10 ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ. 70ಕ್ಕೂ ಹೆಚ್ಚು ವಿದ್ಯುತ್ ಕಂಬಗಳು 10 ಮರಗಳು ರಸ್ತೆಗುರುಳಿವೆ.ಮುಂಜಾಗೃತ ಕ್ರಮವಾಗಿ ಜಿಲ್ಲೆಯಾದ್ಯಂತ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಮಧ್ಯೆ ಹಾವೇರಿ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಂತು ಪ್ರಯಾಣಿಕರು ಪರದಾಡುವಂತಾಯಿತು. ಹಾವೇರಿ ಹೂವಿನಹಡಗಲಿ ಸಂಪರ್ಕಿಸುವ ರಸ್ತೆಯ ಯತ್ತಿನಹಳ್ಳಿ ಬಳಿ ಮರವೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಇನ್ನು ನಾಗನೂರು ಕೂಡಲ ಸಂಪರ್ಕಿಸುವ ಬ್ಯಾರೇಜ್ ಕಮ್ ಬ್ರಿಡ್ಜ್ ನೀರಿನಿಂದ ಆವೃತವಾಗಿದೆ. ಅಲ್ಲದೆ ಕಳಸೂರ - ಹಾವೇರಿ ಸಂಪರ್ಕಿಸುವ ರಸ್ತೆ ಸಹ ನೀರಿನಿಂದಾವೃತವಾಗಿದ್ದು, ಜನರು ಬೇರೆ ಮಾರ್ಗಗಳಲ್ಲಿ ಸಂಚರಿಸುತ್ತಿದ್ದಾರೆ. ಹಾವೇರಿಯ ಶಾಂತಿನಗರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು ಸಂತ್ರಸ್ತರಿಗೆ ನಾಗೇಂದ್ರನಮಟ್ಟಿಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.