ಹಾವೇರಿ: ಪೊಲೀಸರು ತಮ್ಮ ಕರ್ತವ್ಯದ ನಡುವೆಯೂ ಸಂಕಷ್ಟದಲ್ಲಿದ್ದವರಿಸಿ ಸ್ಪಂದಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಹಿಳೆಯೊಬ್ಬಳು ಎರಡು ತಿಂಗಳ ಮಗು ಎತ್ತಿಕೊಂಡು ಆಸ್ಪತ್ರೆಗೆ ಹೊರಟಿದ್ದಳು. ಆಸ್ಪತ್ರೆಗೆ ಹೋಗಲು ವಾಹನವಿರಲಿಲ್ಲ. ಅಷ್ಟೇ ಅಲ್ಲದೆ ಪೊಲೀಸರು ತನ್ನನ್ನು ಬಿಡುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿ ಕುಳಿತಿದ್ದಳು.
ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದ ಪೊಲೀಸರು ತಮ್ಮ ವಾಹನದಲ್ಲಿ ತಾಯಿ ಮತ್ತು ಮಗುವನ್ನ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ಬಿಟ್ಟು ಬಂದರು. ಇಬ್ಬರೂ ಬೇಗನೆ ಗುಣಮುಖವಾಗುವಂತೆ ಹಾರೈಸಿ ಮತ್ತೆ ತಮ್ಮ ಕರ್ತವ್ಯಕ್ಕೆ ಹಾಜರಾದರು. ಪೊಲೀಸರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾವೇರಿಯಲ್ಲಿ ಸಂಪೂರ್ಣ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ:
ಜಿಲ್ಲಾಡಳಿತ ಜಾರಿಗೆ ತಂದಿರುವ ಸಂಪೂರ್ಣ ಲಾಕ್ ಡೌನ್ ಎರಡನೇಯ ದಿನ ಹಾವೇರಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವರ್ತಕರು ಅಂಗಡಿ ಮುಂಗಟ್ಟಗಳನ್ನು ಮುಚ್ಚಿ ಲಾಕ್ಡೌನ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜನರ ಓಡಾಟ ಸಹ ವಿರಳವಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.
ಹಾಲು, ಔಷಧಿ, ಆಸ್ಪತ್ರೆ ಮತ್ತು ಪೆಟ್ರೋಲ್ ಸೇರಿದಂತೆ ಕೆಲವೇ ಕೆಲವು ಸೇವೆಗಳಿಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ವೃತ್ತಗಳು ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದ್ದು, ಅನಗತ್ಯವಾಗಿ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿರುವ ಯುವಕರಿಗೆ ದಂಡದ ಬಿಸಿ ಮುಟ್ಟಿಸಲಾಗುತ್ತಿದೆ.
ನಗರ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳನ್ನ ತಪಾಸಣೆ ಮಾಡಿ ಬಿಡಲಾಗುತ್ತಿದೆ. ಸರಿಯಾದ ಪ್ರತಿಕ್ರಿಯೆ ನೀಡದ ಚಾಲಕರನ್ನ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ಕೆಲವು ವಾಹನಗಳನ್ನ ಸೀಜ್ ಸಹ ಮಾಡಲಾಗಿದೆ. ಸಾರ್ವಜನಿಕರು ಲಾಕ್ ಡೌನ್‌ಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ.