ಹಾವೇರಿ: ಉಕ್ರೇನ್ನಲ್ಲಿ ಮೃತಪಟ್ಟಿರುವ ನವೀನ್ ಗ್ಯಾನಗೌಡ್ರ ನಿವಾಸಕ್ಕೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನವೀನ್ ನಿವಾಸಕ್ಕೆ ತೆರಳಿ, ನವೀನ್ ಭಾವಚಿತ್ರಕ್ಕೆ ಹೂ ಹಾಕಿ ಸ್ವಾಮೀಜಿ ಪೂಜೆ ಸಲ್ಲಿಸಿದರು.
ನವೀನ್ ಸಾವು ಎಲ್ಲಾ ಮಠಾಧೀಶರಿಗೆ ಪಾಠವಾಗಬೇಕು. ಕೇಂದ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲಾತಿ ಸಿಗಬೇಕು. ಎಲ್ಲಾ ಮಠಾಧೀಶರು ಈ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ. ಲಿಂಗಾಯತ ಸಮುದಾಯದ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಾತಿ ಬೇಕಾಗಿದೆ. ಪ್ರತಿಭಾವಂತರು ಮೀಸಲಾತಿ ಇಲ್ಲದ ಕಾರಣಕ್ಕೆ ಬೇರೆ ಕಡೆಗೆ ಹೋಗಿ ಕಲಿಯೋ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ವಾಮೀಜಿ ಹೇಳಿದರು.
ಲಿಂಗಾಯತ ಮುಖ್ಯಮಂತ್ರಿಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಎಂಟರಲ್ಲಿ ಒಬ್ಬರಾಗೋದು ಬೇಡ. ಇದು ನಮಗೆ ಇಷ್ಟವಿಲ್ಲ. ಅಧಿಕಾರ ಇವತ್ತು ಇರುತ್ತೆ, ನಾಳೆ ಹೋಗುತ್ತೆ. ಅಧಿಕಾರದಲ್ಲಿ ಇರುವಾಗಲೇ ಹೊಸ ಇತಿಹಾಸ ನಿರ್ಮಾಣ ಮಾಡಿ. ಇಲ್ಲದಿದ್ದರೆ ಲಿಂಗಾಯತ ಸಮಾಜ ನಿಮ್ಮನ್ನೂ ಅಗೌರವದಿಂದ ಕಾಣೋ ಸಂದರ್ಭ ಬರಬಹುದು ಎಂದು ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ: ಉಕ್ರೇನ್ನಲ್ಲಿರುವ ಕನ್ನಡಿಗರ ಜೊತೆ ದೂರವಾಣಿ ಮೂಲಕ ಮಾತನಾಡಿದ ಸಿಎಂ ಬೊಮ್ಮಾಯಿ
ಹಿಂದೆ ಯಡಿಯೂರಪ್ಪನವರು ಮಾಡಬಹುದು ಅಂತಾ ನಿರೀಕ್ಷೆ ಇಟ್ಟುಕೊಂಡಿದ್ದೆವು, ಆದರೆ ಮಾಡಲಿಲ್ಲ. ಮಠಗಳಿಗೆ ಹಣ ಕೊಡೋದು, ಜಾತ್ರೆ ಮಾಡೋದು, ಅನ್ನದಾಸೋಹ ಮುಖ್ಯವಲ್ಲ. ಮಕ್ಕಳಿಗೆ ಬೇಕಾಗಿರೋದು ಶಿಕ್ಷಣ. ಲಿಂಗಾಯತ ಸಮಾಜಕ್ಕೆ ಮೀಸಲಾತಿ ಕೊಡಿಸಿ ಇತಿಹಾಸ ನಿರ್ಮಾಣ ಮಾಡಬೇಕು. ಲಿಂಗಾಯತರ ಪರಿಸ್ಥಿತಿ ಹೇಗಾಗಿದೆ ಎಂದರೇ, ಮೆರಿಟ್ ಇದ್ರೂ ಮೀಸಲಾತಿ ಇಲ್ಲ. ಮೀಸಲಾತಿ ಅನ್ನೋ ವಿಚಾರಕ್ಕೆ ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕಿದೆ. ನವೀನ್ ಪಾರ್ಥೀವ ಶರೀರ ತರೋ ಪ್ರಯತ್ನ ಮಾಡಲಾಗುತ್ತಿದೆ. ನವೀನ್ ಸಹೋದರ ಹರ್ಷನಿಗೆ ಆತನ ಅರ್ಹತೆ ಆಧಾರದ ಮೇಲೆ ಸರ್ಕಾರ ಉದ್ಯೋಗ ನೀಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.