ಬೆಂಗಳೂರು: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕೊರೊನಾ ಸೋಂಕಿನಿಂದ ಮೃತರಾಗಿದ್ದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಾರ ಬೀಡು ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಪ್ಪ ಫಕೀರಪ್ಪ ತಳಗಡಿ ಅವರ ಕುಟುಂಬಸ್ಥರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪರಿಹಾರ ಹಣ 30 ಲಕ್ಷ ರೂ. ಮೌಲ್ಯದ ಚೆಕ್ ವಿತರಿಸಿದರು.
ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಣ, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಹಾಗೂ ಹಲವು ಪರಿಹಾರ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಸಮಾಜ ಕಲ್ಯಾಣ ಇಲಾಖೆಯು ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳನ್ನು ಜಿಲ್ಲಾಡಳಿತಗಳ ಕೋರಿಕೆಗೆ ಅನುಗುಣವಾಗಿ ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಿ, ಹೊರರಾಜ್ಯಗಳಿಂದ ಬಂದವರು ಹಾಗೂ ಜಿಲ್ಲಾಡಳಿತ ಸೂಚಿಸಿದವರಿಗೆ ಆರೈಕೆ ಮಾಡಲಾಗುತ್ತಿದೆ ಎಂದರು.
ಮಲ್ಲಪ್ಪ ಫಕೀರಪ್ಪ ತಳಗಡಿ ಅವರು ಕ್ವಾರಟೈನ್ ಕೇಂದ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಕೊರೊನಾ ವೈರಸ್ ಸೊಂಕಿನಿಂದ ಆಗಸ್ಟ್ 19ರಂದು ಮೃತಪಟ್ಟಿದ್ದರು. ಅವರ ಸೇವೆ ಸ್ಮರಣೀಯ ಎಂದು ಸ್ಮರಿಸಿದರು.
ಮೃತರ ಕುಟುಂಬ ವರ್ಗಕ್ಕೆ ಪರಿಹಾರ ಹಣವಾಗಿ 30 ಲಕ್ಷ ರೂ. ನೀಡಿ, ಚಿಕಿತ್ಸೆ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗಿದೆ. ಅವರ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ನಿಯಮದಂತೆ ಅನುಕಂಪದ ಆಧಾರದಡಿ ನೌಕರಿಯನ್ನು ನೀಡಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.
ನಂತರ ಶಿಕ್ಷಕರ ಕ್ಷೇತ್ರ ಹಾಗೂ ಪದವಿಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರೊಂದಿಗೆ ಡಿಸಿಎಂ ಸಭೆ ನಡೆಸಿ , ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಭೋದಕ ಹಾಗೂ ಭೋದಕೇತರರ ಸಿಬ್ಬಂದಿ ವರ್ಗದವರ ವಿವಿಧ ಸಮಸ್ಯೆ ಹಾಗೂ ಸೌಲಭ್ಯಗಳ ಕುರಿತು ಚರ್ಚಿಸಿದರು.
ಕರ್ನಾಟಕ ವಸತಿ ಶಿಕ್ಷಣ ಸಂಘಗಳ ಸಂಘದ ಅಧೀನ ವಸತಿ ಶಾಲೆಗಳ ಭೋದಕ ಸಿಬ್ಬಂದಿಗೆ ಹಿರಿಯ ಐಎಎಸ್ ಅಧಿಕಾರಿ ಕುಮಾರ ನಾಯಕ್ ನೇತೃತ್ವದ ಸಮಿತಿಯ ಶಿಫಾರಸ್ಸಿನಂತೆ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡುವುದು. ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮೂಲವೇತನದ ಶೇ 10ರಷ್ಟು ವಿಶೇಷ ಭತ್ಯೆ ಮಂಜೂರು, ವಸತಿ ನಿಲಯಗಳ ಖಾಯಂ ನೌಕರರಿಗೆ ಮತ್ತು ಅವರ ಅವಲಂಭಿತ ಕುಟುಂಬ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಜ್ಯೋತಿ ಸಂಜೀವಿನಿ ಸೌಲಭ್ಯ ಅನುಷ್ಠಾನ, ಖಾಯಂ ಶಿಕ್ಷಕರುಗಳಿಗೆ ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ, ನೌಕರರಿಗೆ ನಿವೃತ್ತಿ, ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯ ವಿಸ್ತರಣೆ, ಶಾಲೆಗಳ ನೌಕರರಿಗೆ ಕಡ್ಡಾಯ ಜೀವ ವಿಮಾ ಯೋಜನೆ(ಕೆಜಿಐಡಿ) ಮತ್ತು ಸಾಮೂಹಿಕ ಗುಂಪು ವಿಮಾ ಯೋಜನೆಯ (ಇಜಿಐಎಸ್ ) ಸೌಲಭ್ಯಗಳನ್ನು ವಿಸ್ತರಿಸುವುದು ಸೇರಿದಂತೆ ವಿವಿಧ ವಿಷಯಗಳು ಕುರಿತು ಚರ್ಚಿಸಿದರು.