ಹಾವೇರಿ : ಸರ್ಕಾರ ನೀಡಿದ ಬೆಳೆ ಪರಿಹಾರ ಅರ್ಜಿ ಕೆಲವೇ ಕೆಲ ರೈತರರಿಗೆ ಬಂದಿದೆ. ಅದು, ರಾಜಕೀಯ ನಾಯಕರ ಹಿಂಬಾಲಕರಿಗೆ ಮಾತ್ರ ನೀಡಲಾಗಿದೆ. ನಿಜವಾದ ರೈತರಿಗೆ ಪರಿಹಾರ ಬಂದಿಲ್ಲ ಎಂಬ ಆರೋಪ ಜಿಲ್ಲೆಯಲ್ಲಿ ಕೇಳಿಬಂದಿದೆ.
ಸರ್ಕಾರ ಎಲ್ಲಾ ರೈತರಿಗೆ ಪರಿಹಾರ ನೀಡಬೇಕು ಇಲ್ಲದಿದ್ದರೆ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ರೈತ ಸಂಘದ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಕಳೆದ ತಿಂಗಳು ಸುರಿದ ಅಕಾಲಿಕ ಮಳೆಗೆ ಹಾವೇರಿ ಜಿಲ್ಲೆಯ ರೈತರು ಅಕ್ಷರಶಃ ಕಂಗಲಾಗಿದ್ದರು. ಭತ್ತ, ಮೆಕ್ಕೆಜೋಳ, ಸೂರ್ಯಕಾಂತಿ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಇನ್ನೂ ಕೆಲ ರೈತರು ಬೆಳೆದ ಬೆಳೆಗಳು ಜಮೀನಿನಲ್ಲಿ ಕೊಳೆತು ಮೊಳಕೆ ಬಿಟ್ಟಿದ್ದವು.
ಬೆಳೆ ಹಾನಿ ಪರಿಹಾರ ನಿಧಿ: ಹಾವೇರಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾಳಾಗಿವೆ. ರೈತರು ಈಗಾಗಲೇ ಕೊರೊನಾ, ಅತಿವೃಷ್ಟಿಯಿಂದ ಕಂಗೆಟ್ಟು ಈ ವರ್ಷ ಬೆಳೆ ಬಂತು ಎನ್ನುವಷ್ಟರಲ್ಲಿ ಅಕಾಲಿಕೆ ಮಳೆ ರೈತರ ಆಸೆಗೆ ತಣ್ಣೀರೆರಚಿತು. ರೈತರ ಬೆಳೆ ಹಾನಿಯಾಗುತ್ತಿದ್ದಂತೆ ಕೃಷಿ ಅಧಿಕಾರಿಗಳು ಜನಪ್ರತಿನಿಧಿಗಳು ರೈತರಿಗೆ ಪರಿಹಾರದ ಭರವಸೆ ನೀಡಿದ್ದರು.
ಸರ್ವೇ ಮಾಡಿ ಕೇವಲ 24 ಗಂಟೆಯಲ್ಲಿಯೇ ಪರಿಹಾರ ವಿತರಿಸುವುದಾಗಿ ಜನಪ್ರತಿನಿಧಿಗಳು ತಿಳಿಸಿದ್ದರು. ಆದರೆ ಅಕಾಲಿಕ ಮಳೆ ಸುರಿದು 24 ಗಂಟೆಯಲ್ಲಾ 24 ದಿನಗಳು ಕಳೆದರೂ ರೈತರಿಗೆ ಪರಿಹಾರ ದೊರೆತಿಲ್ಲಾ. ಅಕಾಲಿಕ ಮಳೆಯಾಗುತ್ತಿದ್ದಂತೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಸಹ ಸರ್ಕಾರ ರೈತರಿಗೆ ಕಡಿಮೆ ಸಮಯಾವಕಾಶ ಕಲ್ಪಿಸಿತ್ತು. ರೈತರು ಈ ಅವಧಿಯಲ್ಲಿಯೇ ಬೆಳೆಹಾನಿ ಕುರಿತಂತೆ ಅರ್ಜಿ ಸಲ್ಲಿಸಿದ್ದರು.
ಆದರೆ ಪರಿಹಾರ ನೋಡಿದರೆ ಕೆಲವೇ ಕೆಲವು ರೈತರಿಗೆ ಬಂದಿದೆ. ಅದು ರಾಜಕೀಯ ಹಿನ್ನೆಲೆ ಇರುವ ರೈತರಿಗೆ ಹಾಗೂ ರಾಜಕೀಯ ಹಿಂಬಾಲಿಕರಿಗೆ ಪರಿಹಾರ ಬಂದಿದೆ ಎಂದು ರೈತರು ಆರೋಪಿಸಿದ್ದಾರೆ. ನಿಜವಾದ ರೈತರಿಗೆ ಪರಿಹಾರ ಬಂದಿಲ್ಲಾ ಎಂದು ರೈತರು ಆರೋಪಿಸಿದ್ದಾರೆ. ಸರ್ಕಾರ ಎಲ್ಲ ರೈತರಿಗೆ ಪರಿಹಾರ ನೀಡಬೇಕು, ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ತುಳಿಯಬೇಕಾಗುತ್ತೆ ಎಂದು ರೈತರು ಎಚ್ಚರಿಕೆ ರವಾನಿಸಿದ್ದಾರೆ.