ಹಾವೇರಿ: ಜಿಲ್ಲಾದ್ಯಂತ ಶನಿವಾರ ಮಳೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಮಲೆನಾಡು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳು ಮೈದುಂಬಿ ಹರಿಯುತ್ತಿವೆ.
ಕೆಲವಡೆ ಈ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೆರೂರು ಗ್ರಾಮದಲ್ಲಿ ಮಳೆರಾಯನ ಆರ್ಭಟಕ್ಕೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಕಬ್ಬು, ಮೆಕ್ಕೆಜೋಳ ಮತ್ತು ಚೆಂಡುಹೂವಿನ ಬೆಳೆ ನೀರುಪಾಲಾಗಿದೆ.
ಸಮೀಪದ ರಣಕೇರಿ ಹಳ್ಳದಿಂದ ನೀರು ಬರುತ್ತಿದ್ದು ರಸ್ತೆಯ ಪಕ್ಕದಲ್ಲಿ ಜಮೀನುಗಳಲ್ಲಿ ನೀರು ನಿಂತಿದೆ. ಚೆಂಡುಹೂವಿನ ಬೆಳೆಹಾನಿಯಾಗಿದೆ. ಇನ್ನು ಮೆಕ್ಕೆಜೋಳ ಮತ್ತು ಕಬ್ಬಿನ ಬೆಳೆಗೆ ನೀರು ಹೊಕ್ಕಿದ್ದು ರೈತರ ಆತಂಕದಲ್ಲಿದ್ದಾರೆ.
ಚೆಂಡುಹೂವು ಬೆಳೆಗೆ ನೀರು ಬಂದರೆ ಕೊಳೆತುಹೋಗುತ್ತೆ, ಕಬ್ಬಿನ ಜಮೀನಲ್ಲಿ 15 ದಿನ ನೀರು ನಿಂತರೇ ಕೆಂಪಾಗಿ ಹಾಳಾಗುತ್ತೆ, ಇನ್ನು ಮೆಕ್ಕೆಜೋಳ ಸಹ ಅಧಿಕ ನೀರಿಗೆ ಹಾಳಾಗುತ್ತೆ. ಈ ಹಳ್ಳ ಪ್ರತಿವರ್ಷ ರೈತರ ಪಾಲಿಗೆ ದುಸ್ವಪ್ನವಾಗಿ ಪರಿಣಮಿಸಿದೆ. 1991 ರಿಂದ ಈ ರೀತಿ ಒಂದಿಲ್ಲ ಒಂದು ವರ್ಷ ಮಳೆನೀರು ನುಗ್ಗುತ್ತೆ.
ಕೇವಲ ಚೆಂಡುಹೂ,ಮೆಕ್ಕೆಜೋಳ ಮತ್ತು ಕಬ್ಬು ಮಾತ್ರವಲ್ಲ. ಇಲ್ಲಿ ಬೆಳೆದ ಮೆಣಸಿನಗಿಡ, ಟೊಮೇಟೊ ಸೇರಿದಂತೆ ಯಾವುದೇ ಬೆಳೆ ಬೆಳೆದರು ನೀರು ನುಗ್ಗುವುದು ತಪ್ಪಿಲ್ಲ. ಇದಕ್ಕೆ ಸಮೀಪದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಸಿಡಿಗಳೇ ಕಾರಣ ಎಂದು ರೈತರು ಆರೋಪಿಸುತ್ತಾರೆ.
ಈ ಭಾಗದಲ್ಲಿ ಬಹುತೇಕ ರೈತರು ಸಣ್ಣ ಹಿಡುವಳಿದಾರರು ಎಕರೆ ಅರ್ಧ ಎಕರೆ ಜಮೀನಿನಲ್ಲಿ ಜೀವನ ಕಟ್ಟಿಕೊಳ್ಳುತ್ತಾರೆ ಆದರೆ, ಮಳೆರಾಯನ ಆವಂತರ ಈ ಬಡರೈತರನ್ನ ಬೀದಿಗೆ ತಂದು ನಿಲ್ಲಿಸುತ್ತಿದೆ. ಇನ್ನು ಈ ಕುರಿತಂತೆ ಅಧಿಕಾರಿಗಳಿಗೆ ತಿಳಿಸಿದರೇ ಅವರು ಬರುವುದೇ ವಿರಳ. ಬಂದರೂ ಕೇವಲ ಪೋಟೋಕ್ಕಾಗಿ ಬಂದು ಹೋಗುವಂತಾಗಿದೆ.
ಕೆಲವೊಮ್ಮೆ ಈ ಕುರಿತಂತೆ ತಹಶೀಲ್ದಾರ್ ಕಚೇರಿಗೆ ಹೋದರೆ ನಿಮ್ಮ ಬೆಳೆ ಹಾನಿ ಬಗ್ಗೆ ದಾಖಲೆಗಳೇ ಇಲ್ಲ ಎನ್ನುವ ಉತ್ತರ ಕೇಳಿ ರೈತರ ಹೈರಾಣಾಗಿದ್ದಾರೆ. ಈ ವರ್ಷ ಸಹ ಇಷ್ಟು ಬೆಳೆಹಾನಿಯಾದರೂ ಯಾವ ಅಧಿಕಾರಿಗಳು ಈ ಕಡೆ ಮುಖಮಾಡಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 48 ಗಂಟೆ ಭಾರೀ ಮಳೆ...