ರಾಣೆಬೆನ್ನೂರ : ಮಳೆಯಿಂದ ಹಾನಿಗೀಡಾದ ತೋಟ, ಗದ್ದೆ ಹಾಗೂ ಜಮೀನುಗಳಿಗೆ ಶಾಸಕ ಅರುಣಕುಮಾರ ಪೂಜಾರ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಮಾಕನೂರ, ಹೊಳೆಆನ್ವೇರಿ, ಮುದೇನೂರು, ಚಳಗೇರಿ ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಮಳೆ-ಗಾಳಿಯಿಂದ ಬಾಳೆ, ಎಲೆತೋಟ ಹಾನಿಯಾಗಿದೆ. ಇದರಿಂದ ನಷ್ಟಕ್ಕೀಡಾದ ರೈತರಿಗೆ ಆತ್ಮಸ್ಥೈರ್ಯ ತುಂಬಿ, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾತ್ರಿ ಸುರಿದ ಭಾರಿ ಮಳೆಯಿಂದಾಗಿ 200 ಎಕರೆಗೂ ಅಧಿಕ ಬಾಳೆ ತೋಟ, ಎಲೆಬಳ್ಳಿ ತೋಟ ಹಾಗೂ ಭತ್ತ ಹಾನಿಯಾಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಹಾನಿಯ ಸಮೀಕ್ಷೆ ಮಾಡಿಸಲಾಗುವುದು. ನಂತರ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ನಿಖರ ಮಾಹಿತಿ ದೊರೆಯಲಿದೆ. ಹಾನಿಯಾದ ರೈತರಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಒದಗಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.