ಹಾವೇರಿ: ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೆ ಕೊರೊನಾ ಹರಡುವಿಕೆ ತಡೆಯುವ ಸೂಕ್ತ ಮಾರ್ಗ. ಹೀಗಾಗಿ ರಾಜ್ಯ ಸರ್ಕಾರ ಲಾಕ್ಡೌನ್ ಮುಂದುವರೆಸಬೇಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಮೊದಲೇ ಲಾಕ್ಡೌನ್ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ವಲ್ಪ ಅವಸರ ಮಾಡಿತ್ತು. ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸದೆ ಕೇವಲ ನಾಲ್ಕು ಗಂಟೆಯಲ್ಲಿ ಲಾಕ್ ಡೌನ್ ಘೋಷಿಸಿತ್ತು. ಲಾಕ್ಡೌನ್ ಗೂ ಮುನ್ನ ರಾಜ್ಯಸರ್ಕಾರಗಳಿಗೆ ಸೂಕ್ತ ಮಾಹಿತಿ ಇದ್ದಿದ್ದರೆ ವಲಸೆ ಕಾರ್ಮಿಕರನ್ನು, ತಮ್ಮ ಸ್ಥಳಗಳಿಗೆ ತಲುಪ ಬಯಸುವವರಿಗೆ ಸೌಲಭ್ಯ ಮಾಡಿಕೊಡಬಹುದಿತ್ತು. ಇಂತ ಏಕಾಏಕಿ ನಿರ್ಧಾರಗಳಿಂದ ಜನ ಇಂದಿಗೂ ಅನ್ನ ನೀರು ಬಿಟ್ಟು ಕಾಲ್ನಡಿಗೆಯಲ್ಲಿ, ಸೈಕಲ್ಗಳಲ್ಲಿ ಸಂಚರಿಸಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಅವರು ಕೊರೊನಾ ಜಾಗೃತಿ ವಿಚಾರದಲ್ಲಿ ರಾಜ್ಯ ಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ರಾಜ್ಯ ಸರ್ಕಾರ ಇನ್ನು ಹೆಚ್ಚು ಜಾಗೃತಿ ಮೂಡಿಸುವ ಮೂಲಕ ಕೊರೊನಾ ಹತೋಟಿಗೆ ತರಬೇಕು ಎಂದು ತಿಳಿಸಿದರು.
ಇನ್ನೂ, ಮಹಾರಾಷ್ಟ್ರದ ಮುಂಬೈ ನಿಂದ ರಾಜ್ಯಕ್ಕೆ ಬರುವವರನ್ನ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದು, ಮುಂದೆ ಯಾವ ಕ್ರಮ ಕೈಗೊಳ್ಳಲಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ ಎಂದು ಜಾರಕಿಹೊಳಿ ತಿಳಿಸಿದರು. .