ಹಾವೇರಿ: ಮಳೆಯಿಂದ ಬಿದ್ದ ಮನೆಗೆ ಪರಿಹಾರ ಬಿಡುಗಡೆ ಮಾಡಲು ಹಣ ಪಡೆಯಲು ಮುಂದಾದ ಪಿಡಿಒ, ಈಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ. ಶಿಗ್ಗಾಂವಿ ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯತ್‌ನಲ್ಲಿದ್ದ ಈರಣ್ಣ ಗಾಣಿಗಿ ಲೋಕಾಯುಕ್ತರ ಬಲೆಗೆ ಬಿದ್ದಿ ಪಿಡಿಒ ಆಗಿದ್ದಾರೆ.
ಪಂಚಾಯ್ತಿ ವ್ಯಾಪ್ತಿಯ ಮುನವಳ್ಳಿ ಗ್ರಾಮದ ಸಂಗಪ್ಪ ಎಂಬುವವರಿಂದ ಹಣ ಪಡೆಯುತ್ತಿದ್ದ ವೇಳೆ ಈರಣ್ಣ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಂಗಪ್ಪನ ಮನೆ ಕಳೆದ ಮುಂಗಾರಿನಲ್ಲಿ ಸುರಿದ ಮಳೆಗೆ ಧರೆಗುರುಳಿತ್ತು. ಈ ಹಿನ್ನೆಲೆಯಲ್ಲಿ ಮನೆಗೆ ಸರ್ಕಾರದ ಪರಿಹಾರ ಹಣ ನೀಡಲು ಸಂಗಪ್ಪ ಕೇಳಿಕೊಂಡಿದ್ದ. ಈ ಸಂದರ್ಭದಲ್ಲಿ ಈರಣ್ಣ ವರ್ಕ್ ಆರ್ಡರ್ ನೀಡಲು 50 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದ.
ಇದೇ ತಿಂಗಳು 10 ರಂದು ಇಪ್ಪತ್ತು ಸಾವಿರ ರೂಪಾಯಿ ಮುಂಗಡವಾಗಿ ಹಣ ಪಡೆದಿದ್ದ ಈರಣ್ಣ ಮತ್ತೆ ಹಣ ನೀಡಲು ಬೇಡಿಕೆ ಇಟ್ಟಿದ್ದ. ಸೋಮವಾರ ಮತ್ತೆ 20 ಸಾವಿರ ಹಣ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಈರಣ್ಣ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹಾಗಾಗಿ ಈರಣ್ಣನನ್ನು ಬಂಧಿಸಿರುವ ಲೋಕಾಯುಕ್ತರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಕುರಿತಂತೆ ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರೇಮಿಯನ್ನು ನಂಬಿ ಪೋಷಕರನ್ನು ಬಿಟ್ಟು ಬಂದ ಯುವತಿ.. ತುಂಡಾಗಿ ಕತ್ತರಿಸಿ ಬೀದಿಗಳಲ್ಲಿ ಎಸೆದ ಪ್ರಿಯಕರ!