ಸಕಲೇಶಪುರ: ತಾಲೂಕಿನ ಬಿರಡಹಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ.
ಬಿರಡಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಕೆರೆ, ಹಲಸುಲಿಗೆ, ಕಿರೇಹಳ್ಳಿ, ಸುಂಡೆಕೆರೆ ಮತ್ತಿತರ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡಾನೆಗಳು ಬೀಡುಬಿಟ್ಟಿದ್ದು, ಅಪಾರ ಪ್ರಮಾಣದ ಕಾಫಿ, ಮೆಣಸು, ಬಾಳೆ ಬೆಳೆಗಳು ಕಾಡಾನೆಗಳ ದಾಂಧಲೆಯಿಂದ ನಾಶಗೊಂಡಿವೆ. ತಾಲೂಕಿನ ಕೆಲವೇ ಭಾಗಗಳಿಗೆ ಸೀಮಿತವಾಗಿದ್ದ ಕಾಡಾನೆಗಳ ಹಾವಳಿ ಬಿರಡಹಳ್ಳಿ ಪಂಚಾಯತ್ಗೂ ವ್ಯಾಪಿಸಿರುವುದು ಅಲ್ಲಿನ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಬೈಕೆರೆ ಗ್ರಾಮದಲ್ಲಿ ಹಾಡಹಗಲೇ ಎರಡು ಆನೆಗಳು ತಿರುಗಾಡಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಕೂಡಲೇ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಂತೆ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.