ಹಾಸನ: ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೇರಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತಹ ಸೂಕ್ತ ಕ್ರಮಗಳನ್ನು ಇನ್ನೆರಡು ದಿನದಲ್ಲಿ ಕೈಗೊಳ್ಳದಿದ್ದರೆ, ಯೂತ್ ಪವರ್ ಏನು ಎಂಬುದನ್ನು ತೋರಿಸುವ ಮೂಲಕ ವಿಧಾನಸೌಧವನ್ನು ನಡುಗಿಸುತ್ತೇವೆ ಎಂದು ಕಾಲೇಜು ವಿದ್ಯಾರ್ಥಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಹಾಸನದ ಜಿಲ್ಲಾಧಿಕಾರಿಗಳ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆಯಿಂದ ಕಾಲೇಜಿನಲ್ಲಿ ಪಾಠ ಪ್ರವಚನ ನಡೆಯದೇ ಸುಮಾರು 21 ದಿನಗಳಾಗಿವೆ. ಹಾಸನದ ಸುಮಾರು 5-6 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 3000ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜುಗಳ ಮೂಲಕ ಪ್ರತಿಭಟನೆ ಮಾಡುತ್ತಾ, ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮನವಿ ಸಲ್ಲಿಸಿದರು.
ಈ ಮೊದಲು ಕೊರೊನಾದಿಂದ ತತ್ತರಿಸಿದ್ದ ಕರ್ನಾಟಕ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳು ಈಗಾಗಲೇ ಪದವಿ, ಸ್ನಾತಕೋತ್ತರ ತರಗತಿಗಳೆಲ್ಲವೂ ಆರಂಭವಾಗಿದ್ದು, ಸರ್ಕಾರಿ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ಪಾಠಗಳು ನಡೆಯದೇ ಇರುವುದು ಶೋಚನೀಯ.
ಈಗ ಮತ್ತೆ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆಯಿಂದ ನಮ್ಮ ಭವಿಷ್ಯ ಅತಂತ್ರವಾಗಿದೆ. ಎರಡು ದಿನದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ರಾಜ್ಯದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಎಬಿವಿಪಿ ಸಂಘಟನೆಯ ಸಹಕಾರದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಅತಿಥಿ ಉಪನ್ಯಾಸಕರನ್ನು ಸರ್ಕಾರ ಕೂಲಿ ಕಾರ್ಮಿಕರಂತೆ ನೋಡುತ್ತಿದ್ದು, ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ವೇತನವನ್ನು ನೀಡಿದರೆ, ನಮ್ಮ ಭವಿಷ್ಯ ಕೂಡಾ ಉತ್ತಮಗೊಳ್ಳುತ್ತದೆ. ಹಾಗಾಗಿ ಅವರ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವ ಮೂಲಕ ನಮಗೂ ನ್ಯಾಯ ದೊರಕಿಸಿ ಕೊಡಬೇಕೆಂದು ಮಾಧ್ಯಮಗಳ ಮೂಲಕ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಹಾಸನದ ಸರ್ಕಾರಿ ಕಲಾ ಕಾಲೇಜು, ಮಹಿಳಾ ಪ್ರಥಮ ದರ್ಜೆ ಕಾಲೇಜು, ಗೃಹ ವಿಜ್ಞಾನ, ಪತ್ರಿಕೋದ್ಯಮ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂಓದಿ: ಪಿಎಸ್ಐ ಮೇಲೆ ಹಲ್ಲೆ ನಡೆಸಿದ್ದ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದ ಪೊಲೀಸರು