ಹಾಸನ: ಶಿಕ್ಷಕನೊಬ್ಬ ಶಿಕ್ಷಕಿಗೆ ಲೈಂಗಿಕ ದೌರ್ಜನ್ಯವೆಸಗಿ ಬ್ಲಾಕ್‌ಮೇಲ್ ಮಾಡಿದ ಪರಿಣಾಮ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರೂ ಆರೋಪಿಗೆ ಪೊಲೀಸರೇ ರಕ್ಷಣೆ ನೀಡುತ್ತಿದ್ದಾರೆಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಧನಂಜಯ ಎಂಬ ಶಿಕ್ಷಕ ಆರೋಪಿ. ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ವೇದ (ಹೆಸರು ಬದಲಿಸಲಾಗಿದೆ) ಎಂಬುವರನ್ನ ಪ್ರೀತಿಸುವ ನಾಟಕವಾಡಿ ದೈಹಿಕ ಸಂಬಂಧವನ್ನೂ ಬೆಳೆಸಿದ್ದನಂತೆ. ಏಕಾಂತದಲ್ಲಿದ್ದ ವಿಡಿಯೋ ಸೆರೆಹಿಡಿದುಕೊಂಡು ಶಿಕ್ಷಕಿಗೆ ಬ್ಲಾಕ್‌ಮೇಲೆ ಮಾಡಿ ಸುಮಾರು 10 ಲಕ್ಷ ರೂ. ಹಣ ಪೀಕಿದ್ದನಂತೆ.
ವೇದ ಅವರ ಅಕೌಂಟ್ನಿಂದ ಧನಂಜಯನಿಗೆ ಹಣ ವರ್ಗಾವಣೆಯಾಗಿರುವುದಕ್ಕೆ ಸಾಕ್ಷಿಯೂ ಇದೆ. ಸದ್ಯ ಧನಂಜಯನ ಕಿರುಕುಳ ತಾಳಲಾರದೆ ಶಿಕ್ಷಕಿ ವೇದ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಕೆಯನ್ನ ಧನಂಜಯನೇ ಆಸ್ಪತ್ರೆಗೂ ದಾಖಲಿಸಿದ್ದಾನೆಯಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರಂತೆ. ಸಾವಿಗೂ ಮುನ್ನ ತನ್ನ ತಾಯಿಯತ್ತ ವೇದ ಆರೋಪಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳಂತೆ. ಮೃತ ವೇದ ಮೊಬೈಲ್ ಪರಿಶೀಲಿಸಿದಾಗ ಧನಂಜಯ ನೀಡಿದ ಕಿರುಕುಳ ಬಟಾಬಯಲಾಗಿದೆ.
ಈ ಬಗ್ಗೆ ಸಾಕ್ಷ್ಯಾಧಾರಗಳ ಸಮೇತ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಆರೋಪಿಯ ವಿರುದ್ಧ ಕ್ರಮಕೈಗೊಳ್ಳಬೇಕಾದ ಪೊಲೀಸರು ಆತನ ರಕ್ಷಣೆಗೆ ನಿಂತಿದ್ದಾರೆಂಬುದು ಕುಟುಂಬಸ್ಥರ ಆರೋಪ. ಅಸಲಿಗೆ ಧನಂಜಯ ಈ ಹಿಂದೆ ಪೊಲೀಸ್ ಹುದ್ದೆಯಲ್ಲಿದ್ದರಿಂದ ಪೊಲೀಸರು ಆತನ ಬೆಂಬಲಕ್ಕೆ ನಿಂತಿದ್ದಾರಂತೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ. ನನ್ನ ವೇದ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಮೃತ ಶಿಕ್ಷಕಿಯ ಸೋದರ ರಾಕೇಶ ಎಂಬುವರು ಮನವಿ ಮಾಡಿದ್ದಾರೆ.