ಹಾಸನ: ರಾಮ ನವಮಿ ವೇಳೆ ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟು ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಗುರುವಾರ ನಡೆದಿದೆ. ಮುರುಳಿ, ಹರ್ಷ ಹಲ್ಲೆಗೊಳಗಾದವರು. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮುರಳಿ ಎಂಬಾತನಿಗೆ ಕುತ್ತಿಗೆ ಹಾಗೂ ಹರ್ಷ ಎಂಬವರಿಗೆ ಹೊಟ್ಟೆಯ ಭಾಗಕ್ಕೆ ಇರಿಯಲಾಗಿದೆ.
ಘಟನೆಯ ಪೂರ್ಣ ವಿವರ: ಚನ್ನರಾಯಪಟ್ಟಣ ನಗರದ ಮೇಘಲಕ್ಕೇರಿ ಕಾಡು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮೋತ್ಸವ ಮತ್ತು ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬಾಗೂರು ರಸ್ತೆಯಲ್ಲಿ ದೇವರ ಉತ್ಸವ ಆಗಮಿಸುತ್ತಿದ್ದಂತೆ ಕೆಲವು ಯುವಕರು ಗಲಾಟೆ ಆರಂಭಿಸಿದ್ದಾರೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ಸ್ಥಳೀಯರು ಕೂಡಲೇ ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯ ಪೊಲೀಸರೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಡಿವೈಎಸ್ಪಿ ರವಿಪ್ರಸಾದ್ ಪರಿಸ್ಥಿತಿ ತಿಳಿಗೊಳಿಸಿದರು. ರಸ್ತೆಯ ಅಲ್ಲಲ್ಲಿ ನಾಕಾಬಂದಿ ಹಾಕಿದ್ದು, ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ: ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ.. ಸಂಧ್ಯಾ ಬಜಾರ್ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನ
ಪಶ್ಚಿಮ ಬಂಗಾಳದಲ್ಲಿ ಹಿಂಸೆ: ಕಳೆದ ವರ್ಷ ನಡೆದಿದ್ದ ರಾಮನವಮಿ ಹಿಂಸಾಚಾರದ ಘಟನೆ ಈ ವರ್ಷವೂ ಮರುಕಳಿಸಿದೆ. ಗುರುವಾರ ಸಂಜೆ ಹೌರಾದ ಸಂಧ್ಯಾ ಬಜಾರ್ ಬಳಿ ಅಂಜನಿ ಪುತ್ರ ಸೇನೆಯ ರಾಮನವಮಿ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಸಂಧ್ಯಾ ಬಜಾರ್ ಸಮೀಪ ಮೆರವಣಿಗೆ ತಲುಪಿದಾಗ ಗಾಜಿನ ಬಾಟಲಿಗಳನ್ನು ಎಸೆಯಲಾಗಿದೆ ಎಂದು ಸಂಘಟಕರು ಆರೋಪಿಸಿದ್ದಾರೆ.
ವಡೋದರಾದಲ್ಲಿ ಕಲ್ಲು ತೂರಾಟ: ಗುಜರಾತ್ನ ವಡೋದರಾ ನಗರದಲ್ಲಿ ರಾಮ ನವಮಿಯ ದಿನದಂದು ಫತೇಹಪುರ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ನಡೆಯುತ್ತಿದ್ದಾಗ ಕಲ್ಲು ತೂರಾಟ ನಡೆದಿದೆ. ಇಡೀ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಡೋದರಾ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಫತೇಹಪುರ ಪ್ರದೇಶ ಬೀಡುಬಿಟ್ಟಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿದೆ.
ವಡೋದರಾ ಸೇರಿದಂತೆ ಇಡೀ ರಾಜ್ಯದಲ್ಲಿ ರಾಮನವಮಿ ಹಬ್ಬ ಆಚರಿಸಲಾಗಿದೆ. ಗುರುವಾರ ಬೆಳಗ್ಗೆಯಿಂದಲೇ ರಾಮ ದೇವರ ದೇವಸ್ಥಾನಗಳಲ್ಲಿ ಭಕ್ತರ ದಂಡು ಕಂಡು ಬಂದಿತ್ತು. ನಗರದ ಹಲವು ಪ್ರದೇಶಗಳಿಂದ ರಾಮನವಮಿ ಮೆರವಣಿಗೆಗಳು ನಡೆದಿವೆ. ಆದರೆ, ಫತೇಹಪುರಾ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ಹದಗೆಡದಂತೆ ಇಡೀ ಪ್ರದೇಶದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಇದನ್ನೂ ಓದಿ: ಟಿಕೆಟ್ ಇದ್ದರೂ ಚಿತ್ರಮಂದಿರದಲ್ಲಿ ನರಿಕ್ಕುವರ್ ಮಹಿಳೆಗೆ ಪ್ರವೇಶ ನಿರಾಕರಣೆ ಆರೋಪ: ಸಿಬ್ಬಂದಿ ವಿರುದ್ಧ ಕೇಸ್