ಚನ್ನರಾಯಪಟ್ಟಣ (ಹಾಸನ): ನಗರ ಪೊಲೀಸ್ ಠಾಣೆ ಪಿಎಸ್ಐ ಕಿರಣ್ ಕುಮಾರ್ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದೆ. ಇಡೀ ಪೊಲೀಸ್ ಇಲಾಖೆಯೇ ಈ ಘಟನೆಯಿಂದ ಆಘಾತಕ್ಕೊಳಗಾಗಿದೆ. ಇದಲ್ಲದೆ ಕೋವಿಡ್ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಕೆಲಸದ ಒತ್ತಡ ಹೆಚ್ಚಾಯಿತಾ? ಎಂಬ ಸಂಶಯ ಆರಂಭವಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ದಕ್ಷಿಣ ವಲಯ ಐಜಿ ವಿಫುಲ್ ಕುಮಾರ್, ಕಿರಣ್ ಒಬ್ಬ ಉತ್ತಮ ಅಧಿಕಾರಿಯಾಗಿದ್ದರು, ನಮ್ಮ ಕುಟುಂಬದ ಸದಸ್ಯರನ್ನು ಈಗ ಕಳೆದುಕೊಂಡಂತಾಗಿದೆ. ಇನ್ನೂ ಅವರ ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಪೊಲೀಸ್ ಇಲಾಖೆಯ ವತಿಯಿಂದ ತನಿಖೆ ಕೈಗೊಳ್ಳಲಾಗುವುದು. ಘಟನೆ ಕುರಿತು ವದಂತಿಗಳಿಗೆ ಯಾರೂ ಕಿವಿಗೊಡಬೇಡಿ. ನಮ್ಮ ಇಲಾಖೆ ಇದೀಗ ಹಲವು ಸಮಸ್ಯೆಗಳ ಜೊತೆಗೆ ಕೆಲಸ ಮಾಡುತ್ತಿದೆ. ಈ ನಡುವೆ ಈ ಘಟನೆಯನ್ನು ರಾಜಕೀಯ ಮಾಡಬೇಡಿ ಎಂದಿದ್ದಾರೆ.
ಕಿರಣ್ ಮಾವ ಮಂಜುನಾಥ್ ಪ್ರತಿಕ್ರಿಯಿಸಿದ್ದು, ಬೆಳಗ್ಗೆ ಮನಗೆ ಬಂದು ನಮ್ಮ ಹತ್ರ ಚೆನ್ನಾಗಿಯೇ ಮಾತನಾಡುತ್ತಿದ್ದರು, ಕೊರೊನಾ ಅಂತ ಹೇಳಿ ಮಕ್ಕಳನ್ನು ನಮ್ಮ ಮನೆಯಲ್ಲಿಯೇ ಬಿಟ್ಟಿದ್ದರು. ಯಾವತ್ತೂ ಸಂಸಾರದಲ್ಲಿ ಗಲಾಟೆ ತೆಗೆದವರಲ್ಲ. ಆದರೆ ಇಂದು ಬೆಳಗ್ಗೆ ಮನೆಯೊಳಗೆ ಹೋದವರು ಹೊರಗೆ ಬಂದಿರಲಿಲ್ಲ. 10.30ರ ನಂತರ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ ಎಂದಿದ್ದಾರೆ.