ಹಾಸನ: ಬಿಜೆಪಿ ಸರ್ಕಾರದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸ್ವಾವಲಂಬನೆ ವಿರೋಧಿ ಸುಗ್ರೀವಾಜ್ಞೆಗಳನ್ನು ಹಿಂಪಡೆಯಲು ಆಗ್ರಹಿಸಿ ರಾಜ್ಯ ರೈತ ಸಂಘ ಸೇರಿ ವಿವಿಧ ಸಂಘಟನೆಗಳಿಂದ ಜಂಟಿಯಾಗಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್ ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿತು. ಭೂ ಸುಧಾರಣಾ ಮತ್ತು ಭೂ ಸ್ವಾಧೀನ ಕಾಯ್ದೆಗಳಿಗೆ ತಿದ್ದುಪಡಿ, ಎಪಿಎಂಸಿ ಕಾಯ್ದೆ, ವಿದ್ಯುಚ್ಛಕ್ತಿ ಖಾಸಗೀಕರಣ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ, ಸರ್ಕಾರಿ ಸಹಕಾರಿ ಸಾರ್ವಜನಿಕ ಉದ್ಯಮಗಳಿಗೆ, ಬ್ಯಾಂಕುಗಳ ಮಾರಾಟ, ಜಿಎಸ್ಟಿ, ಸಿಎಎ, ಎನ್ಆರ್ಎ ರಾಷ್ಟ್ರೀಯ ಶಿಕ್ಷಣ ನೀತಿ ಮೇಲ್ವರ್ಗಕ್ಕೆ ಶೇ.10ರಷ್ಟು ಮೀಸಲಾತಿ, ಕಾರ್ಮಿಕರ ಉದ್ಯೋಗ ನಷ್ಟ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ಗುಂಪು ಥಳಿತ ಹಾಗೂ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿರಾಕರಣೆ, ಕಾರ್ಪೊರೇಟ್ ಉದ್ದಿಮೆದಾರರ ಸಾಲ ಮನ್ನಾ, ಆರ್ಬಿಐನ ಆಪದ್ಧನ ದುರ್ಬಳಕೆ ಜೊತೆಗೆ ಜಾತಿವಾದಿ ಮತ್ತು ಬಂಡವಾಳ ಶಾಹಿ ಹಿತಾಸಕ್ತಿಗಳು ಮೇಲುಗೈ ಪಡೆದಿರುವುದಕ್ಕೆ ಜ್ವಲಂತ ನಿದರ್ಶನಗಳಾಗಿವೆ ಎಂದರು.
ಕೊರೊನಾ ರೋಗವು ಪ್ರತಿಯೊಬ್ಬರಿಗೂ ತೀವ್ರ ರೀತಿಯ ಸಂಕಷ್ಟಗಳನ್ನು ತಂದೊಡ್ಡಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ. ಪ್ರವಾಹ ಸೃಷ್ಟಿಸಿರುವ ಬಗೆಹರಿಯದ ಸಂಕಷ್ಟಗಳು ಎದುರಾಗಿವೆ. ಉದ್ಯೋಗ, ಕೂಲಿ ನಷ್ಟ, ವಲಸೆ ಕಾರ್ಮಿಕ ಸಂಕಷ್ಟ, ಮಕ್ಕಳ ಅನಿಶ್ಚಿತತೆ, ದುಬಾರಿ ವೈದ್ಯಕೀಯ ವೆಚ್ಚ, ಜನಸಾಮಾನ್ಯರಿಗೆ ಚಿಂತೆಗೀಡು ಮಾಡಿರುವ ಬೆಲೆ ಏರಿಕೆ ಇವುಗಳಿಂದ ಸಾರ್ವಜನಿಕರು ಬದುಕುಳಿಯುವುದೇ ಕಷ್ಟ ಎಂದು ಆತಂಕ ವ್ಯಕ್ತಪಡಿಸಿದರು.
ಇಷ್ಟೊಂದು ಗಂಭೀರ ಸಮಸ್ಯೆಗಳಿದ್ದರೂ ರಾಜ್ಯ ಸರ್ಕಾರ ಮಾತ್ರ ಸ್ಪಂದಿಸಿ ಪರಿಹಾರ ಕಲ್ಪಿಸದೇ ಪ್ರಜಾಸತ್ತಾತ್ಮಕವಾಗಿ ಸುಗ್ರೀವಾಜ್ಞೆ ಹೊರಡಿಸಿ ಜನರನ್ನು ಮತ್ತಷ್ಟು ಕಂಗೆಡಿಸಲು ನಿಂತಿದೆ. ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತೀವ್ರವಾಗಿ ಖಂಡಿಸುವುದಾಗಿ ಎಚ್ಚರಿಸಿದರು. ಈ ನಿಟ್ಟಿನಲ್ಲಿ ಇದೇ 28ರ ಸೋಮವಾರ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.