ಹಾಸನ: ಜಿಲ್ಲೆಯ ಚರ್ಚ್‍ಗಳ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಕ್ಸೇವಿಯರ್ ಫ್ರಾನ್ಸಿಸ್ ವಿರುದ್ಧ ಪ್ರತಿಭಟನೆ ನಡೆಯಿತು.
ಚರ್ಚ್ ಅನುದಾನದ ಹಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳುವ ಮೂಲಕ ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ ಸಾಮಾಜಿಕ ಹೋರಾಟಗಾರ ಕ್ಸೇವಿಯರ್ ಫ್ರಾನ್ಸಿಸ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕ್ರೈಸ್ತ ಮುಖಂಡರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ನೂರಕ್ಕೂ ಅಧಿಕ ಪ್ರತಿಭಟನಾಕಾರರು ಕ್ಸೇವಿಯರ್ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳಕ್ಕೆ ಸಂಸದ ಪ್ರಜ್ವಲ್ ರೇವಣ್ಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಡಿ ಜಿಲ್ಲೆಯ ಏಳು ಚರ್ಚ್‍ಗಳ ಅಭಿವೃದ್ಧಿಗೆ ಇದುವರೆಗೆ 7.20 ಕೋಟಿ ರೂ. ಮಂಜೂರಾಗಿದ್ದು 6.11 ಕೋಟಿ ರೂ. ಬಿಡುಗಡೆಯಾಗಿದೆ. ಸರ್ಕಾರ ನೀಡಿದ ಎಲ್ಲ ಹಣವನ್ನು ಕ್ರಮಬದ್ಧವಾಗಿ ವಿನಿಯೋಗ ಮಾಡಲಾಗಿದೆ. ಆದರೆ, ಫ್ರಾನ್ಸಿಸ್ ಕ್ಸೆವಿಯರ್ 15 ಕೋಟಿ ರೂ. ಅನುದಾನ ದೊರೆತಿದ್ದು, ಚರ್ಚ್‍ನ ಪಾದ್ರಿ ಹಾಗೂ ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂದರು.
ಉಪವಿಭಾಗಾಧಿಕಾರಿ ಡಾ. ನವೀನ್ ಭಟ್ ನೇತೃತ್ವದಲ್ಲಿ ಅವ್ಯವಹಾರ ಆರೋಪ ಸಂಬಂಧ ತನಿಖೆ ನಡೆಯುತ್ತಿದ್ದರೂ ಫ್ರಾನ್ಸಿಸ್ ತಾನೇ ತನಿಖಾ ಅಧಿಕಾರಿಯಂತೆ ಚರ್ಚ್‍ಗಳಿಗೆ ಭೇಟಿ ನೀಡಿ, ಛಾಯಾಚಿತ್ರ ತೆಗೆದು, ಅಲ್ಲಿನ ಪಾದ್ರಿ ಹಾಗೂ ಸಿಸ್ಟರ್ಸ್‍ಗಳಿಗೆ ಬೆದರಿಕೆ ಹಾಕುತ್ತಿದ್ದಾನೆ. ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ಸಲ್ಲಿಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ರೈಸ್ತ ಮುಖಂಡರಿಗೆ ಅವಮಾನ ಮಾಡಿದ್ದಾನೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಚರ್ಚ್ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ ತನಗೂ ಪಾಲು ನೀಡಬೇಕು ಎಂದು ಫ್ರಾನ್ಸಿಸ್ ಬೇಡಿಕೆಯಿಟ್ಟಿದ್ದ. ಇದಕ್ಕೆ ಸಮುದಾಯ ನಾಯಕರು ಒಪ್ಪದ ಹಿನ್ನೆಲೆ ಈ ರೀತಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಈತನಿಂದ ಚರ್ಚ್‍ಗಳಿಗೆ ಕೆಟ್ಟ ಹೆಸರು ಅಂಟಿದ್ದು, ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.