ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ಕಂದಲಿಯಿಂದ ಮಾರನಹಳ್ಳಿಯವರೆಗಿನ ರಸ್ತೆಗಳು ಹದಗೆಟ್ಟಿದ್ದು, ಒಂದೆರಡು ದಿನಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಕೆಲಸ ಆರಂಭವಾಗದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ಎಚ್ಚರಿಸಿದರು.
ಆಲೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ತಿಂಗಳು ಸತತ ಮಳೆಯಿಂದಾಗಿ ರಸ್ತೆ ಹಾಳಾಗಿವೆ. ಓಡಾಡಲು ತೀವ್ರ ತೊಂದರೆಯಾಗಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಆಲೂರು ಬಾಳ್ಳುಪೇಟೆ ಸಕಲೇಶಪುರದ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಪರಿಣಾಮವಾಗಿ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ.
ಇದರ ಪ್ರಕಾರ ಯಾವುದೇ ಕಾರಣ ನೀಡದೇ ಮರು ಡಾಂಬರೀಕರಣದ ಕೆಲಸವಾಗಬೇಕು. ಆಲೂರು ಪಟ್ಟಣದಲ್ಲಿ ಕಳಪೆ ಕಾಮಗಾರಿ ಅಥವಾ ಮಳೆಯಿಂದಾಗಿ ಆ ರಸ್ತೆಯು ತೀರಾ ಹದಗೆಟ್ಟಿದೆ. ಮುಖ್ಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕರೆಸಿ ರಸ್ತೆಯ ಕೆಲಸವನ್ನು ನಿರ್ವಹಿಸಬೇಕೆಂದು ಸೂಚನೆ ನೀಡುತ್ತೇನೆ. ಕೆಲಸ ಪ್ರಾರಂಭವಾಗದಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.