ಹಾಸನ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಎದುರು ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಒಂದು ಗುಂಪು ಪ್ರತಿಭಟನೆ ಮಾಡಿದರೇ ಮತ್ತೊಂದು ಗುಂಪು ದಿನಕ್ಕೆ ಒಂದು ಗಂಟೆ ಮುಷ್ಕರದಲ್ಲಿ ಪಾಲ್ಗೊಂಡು ಕೆಲಸದಲ್ಲಿ ನಿರತರಾಗಿದ್ದಾರೆ.
ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಕಚೇರಿ ಸಿಬ್ಬಂದಿ ಹಲವಾರು ವರ್ಷಗಳಿಂದ ಬೇಡಿಕೆಗಳನ್ನು ಇಟ್ಟಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಮತ್ತು ಇತರ ಬೇಡಿಕೆಗಳನನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.
ಕಳೆದ 9 ದಿನಗಳಿಂದಲೂ ಕೆಲಸಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಂಡಿದ್ದೇವೆ. ಇದುವರೆಗೂ ಸ್ಪಂದಿಸದೇ ಇರುವುದರಿಂದ ಸಾರ್ವಜನಿಕರು ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ಕೊರೊನಾ ವೇಳೆಯಲ್ಲಿ ಬಿಡುವಿಲ್ಲದೇ ಕೆಲಸ ಮಾಡಿದರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಆದರೆ, ಕೊರೊನಾ ಪಾಸಿಟಿವ್ ಇದೆ ಎಂದು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಲ್ಲಿ ಕೆಲವರು ದಿನದ ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ಹೇಳಿದರು.
ಡಿಎಚ್ಓ ಡಾ.ಸತೀಶ್ ಮಾತನಾಡಿ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಮ್ಮ ಮುಷ್ಕರವನ್ನು ವಾಪಸ್ ಪಡೆದು ಕೆಲಸ ಮಾಡುವುದಾಗಿ ಎನ್ಎಚ್ಆರ್ಎಂನಲ್ಲಿ ಕೆಲಸ ಮಾಡುತ್ತಿರುವ ನೌಕರರು ಜಿಲ್ಲಾಡಳಿತ ಮತ್ತು ಜಿಪಂ ಸಿಇಒ ಜೊತೆ ಪದಾಧಿಕಾರಿಗಳು ಮಾತನಾಡಿ ಹೇಳಿದ್ದರು. ಆದರೆ, ರಾಜ್ಯ ಕಮಿಟಿಯಿಂದ ಕೆಲಸ ಮಾಡದೇ ಮುಷ್ಕರ ಮುಂದುವರೆಸುವಂತೆ ಸೂಚನೆ ಬಂದಿದೆ. ಈ ಸಂಘದ ಕಮಿಟಿಯಲ್ಲೇ ಎರಡು ಗುಂಪುಗಳಾಗಿ ಒಂದು ಗುಂಪು ಕೆಲಸಕ್ಕೆ ಬರುವುದಾಗಿ ಹೇಳಿದರೆ ಮತ್ತೊಂದು ಗುಂಪು ಮುಷ್ಕರ ಮುಂದುವರೆಸುವುದಾಗಿ ತಿಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.